‘PM-CARES’ ಪ್ರಧಾನಿ ಮೋದಿಯಿಂದ ನಡೆದಿರುವ ಅತಿದೊಡ್ಡ ಸಾಂಸ್ಥಿಕ ಹಗರಣ: ಪ್ರಿಯಾಂಕ್ ಖರ್ಗೆ

Update: 2026-08-19 20:35 IST

ಗೃಹ ಸಚಿವ ಪ್ರಿಯಾಂಕ್ ಖರ್ಗೆ (Photo: X)

ಬೆಂಗಳೂರು: ಪಿಎಂ ಕೇರ್ಸ್ ಎಂಬುದು ಪ್ರಧಾನಿ ಮೋದಿಯವರಿಂದ ನಡೆದಿರುವ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲೊಂದು ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ತುರ್ತು ಪರಿಹಾರ ಕಾರ್ಯಗಳ ಹೆಸರಿನಲ್ಲಿ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುತ್ತಿರುವ ಮೋದಿ ಸರಕಾರ, ಅಗತ್ಯವಿರುವ ಸಂದರ್ಭದಲ್ಲಿ ಆ ಹಣವನ್ನು ಖರ್ಚು ಮಾಡುವ ಯಾವುದೇ ಉದ್ದೇಶ ಹೊಂದಿಲ್ಲದಿದ್ದರೆ, ಅದನ್ನು ಏಕೆ ಸಂಗ್ರಹಿಸುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಪಿಎಂ ಕೇರ್ಸ್ ನಿಧಿಯ 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಲಭ್ಯವಿದ್ದ 8,452 ಕೋಟಿ ರೂ.ಗಳಲ್ಲಿ ಕೇವಲ ಶೇ.0.01ರಷ್ಟು ಹಣವಷ್ಟೇ ಬಳಕೆಯಾಗಿದೆ. ಜಾರಿಗೊಳಿಸುವ ಸಂಸ್ಥೆಗಳಿಂದ 324 ಕೋಟಿ ರೂ.ಗಳನ್ನು ಹಿಂದಿರುಗಿಸಲಾಗಿದೆ ಎಂಬಂತಹ ಕೆಲವು ಅನುಮಾನಾಸ್ಪದ ನಮೂದುಗಳೂ ಇವೆ ಎಂದು ಅವರು ತಿಳಿಸಿದ್ದಾರೆ.

ಆ ಸಂಸ್ಥೆಗಳು ಯಾವುವು ಅಥವಾ ಹಣವನ್ನು ಏಕೆ ಹಿಂದಿರುಗಿಸಲಾಯಿತು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇನ್ನೂ ಹೆಚ್ಚು ಅನುಮಾನ ಮೂಡಿಸುವ ಸಂಗತಿಯೆಂದರೆ, ಹಣಕಾಸು ಹೇಳಿಕೆಗೆ ಸಂಬಂಧಿಸಿದ ಪೂರಕ ಟಿಪ್ಪಣಿಗಳನ್ನು ಕೈಬಿಡಲಾಗಿದೆ. ತುರ್ತು ಪರಿಸ್ಥಿತಿಗಳು ಮತ್ತು ಸಂಕಷ್ಟದ ಸಂದರ್ಭಗಳನ್ನು ಎದುರಿಸಲು ಪ್ರತಿಕ್ರಿಯೆಯಾಗಿ ಈ ನಿಧಿಯನ್ನು 2020ರ ಮಾರ್ಚ್‍ನಲ್ಲಿ ಸ್ಥಾಪಿಸಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಂದಿನಿಂದ ಭಾರತವು ಕೋವಿಡ್‍ನ ಭೀಕರ ಪರಿಣಾಮಗಳನ್ನು, ಭೀಕರ ಚಂಡಮಾರುತಗಳನ್ನು, ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ವಿನಾಶಕಾರಿ ಪ್ರವಾಹಗಳನ್ನು ಎದುರಿಸಿದೆ. ಇದೀಗ ದೇಶದ ಹಲವು ಭಾಗಗಳಲ್ಲಿ ತೀವ್ರ ಬರ ಹಾಗೂ ಸಂಕಷ್ಟವೂ ಎದುರಾಗಿದೆ. ಜನರು ಸಂಕಷ್ಟದಲ್ಲಿರುವಾಗ, ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬಳಸದೇ ಇರುವುದು ನೇರವಾಗಿ ಕ್ರೂರತೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News