ಸಾಂದರ್ಭಿಕ ಚಿತ್ರ | PC : Image by brgfx on Magnific

ಬೆಂಗಳೂರು : ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅರಿವು ಕೇಂದ್ರ (ಗ್ರಂಥಾಲಯ)ಗಳ ಮೇಲ್ವಿಚಾರಕರಿಗೆ 19,200 ರೂ. ಕನಿಷ್ಠ ವೇತನ ಖಾತ್ರಿ ಪಡಿಸಲು ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 5420ಕ್ಕೂ ಅಧಿಕ ಗ್ರಂಥಾಲಯ ಮೇಲ್ವಿಚಾರಕರಿದ್ದು, ಇವರಿಗೆ ಈ ಹಿಂದೆ 12 ಸಾವಿರ ರೂ. ಗೌರವ ಧನ ನೀಡಲಾಗುತ್ತಿತ್ತು, ಕಾರ್ಮಿಕ ಇಲಾಖೆ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದ ತರುವಾಯ ಇವರ ಗೌರವಧನ 19,201ರೂ. ಆಗಿದೆ ಎಂದು ತಿಳಿಸಿದ್ದಾರೆ.

ಗ್ರಂಥಾಲಯ ಮೇಲ್ವಿಚಾರಕರಿಗೆ ನೀಡುವ ಮಾಸಿಕ 19201 ರೂ.ಗಳ ಪೈಕಿ 12,000 ರೂ.ಗಳನ್ನು ಸರಕಾರದಿಂದ ಪಾವತಿಸಲಾಗುತ್ತಿದ್ದು, ಉಳಿಕೆ ಮೊತ್ತ 7,201ರೂ.ಗಳನ್ನು ಮುಂದೆ ರಾಜ್ಯಮಟ್ಟದಲ್ಲಿ ಸಂಗ್ರಹಿಸಲಾಗುವ ಗ್ರಂಥಾಲಯ ಉಪಕರ (ಲೈಬ್ರೆರಿ ಸೆಸ್)ದಿಂದ ಪಾವತಿಸಲು ತಾವು ಅನುಮೋದನೆ ನೀಡಲಾಗಿದೆ. ಇದರಿಂದ ಅರಿವು ಕೇಂದ್ರದ ಪ್ರತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ 19,201ರೂ. ಕನಿಷ್ಠ ಗೌರವಧನ ಪಾವತಿಯಾಗಲಿದೆ.

ಅರಿವು ಕೇಂದ್ರಗಳಿಗೆ ಕಿಯೋನಿಕ್ಸ್ ಹೊಸದಾಗಿ ಹೊರತಂದಿರುವ ಎ.ಐ. ಆಧಾರಿತ ಕಂಪ್ಯೂಟರ್ ಗಳನ್ನು ನೀಡುವುದಾಗಿ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳ, ಗ್ರಾಮೀಣ ಯುವಜನರ ಕಲಿಕೆಗೆ ಅನುಕೂಲವಾಗಲಿದೆ.ಗ್ರಾಮೀಣ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಗ್ರಂಥಾಲಯಗಳಿಗೆ ಮೇಜು, ಕುರ್ಚಿ ಮೊದಲಾದ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಉತ್ತಮ ಪುಸ್ತಕ ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಡಿಜಿಟಲ್ ಗ್ರಂಥಾಲಯಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ ಎಂದರು.

ಅರಿವು ಕೇಂದ್ರಗಳಲ್ಲಿ ಸ್ಥಳೀಯ ಉತ್ಸಾಹಿ ಯುವಜನರಿಗೆ ವಿವಿಧ ವಿದೇಶೀ ಭಾಷೆಗಳನ್ನು ಮಾತನಾಡುವ ತರಬೇತಿ ಶಿಬಿರಗಳನ್ನೂ ಆಯೋಜಿಸುವ ಮೂಲಕ ಅವರ ಉದ್ಯೋಗಾರ್ಹತೆ ಹೆಚ್ಚಿಸಲು ಸೂಚಿಸಲಾಗಿದೆ ಎಂದೂ ಈಶ್ವರ ಖಂಡ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor