ಬೆಂಗಳೂರು  : ರಾಜ್ಯ ಸರಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸೆ.1ರಿಂದ ಲಿಂಗಸುಗೂರಿನಿಂದ ನಾವು ಪಾದಯಾತ್ರೆ ಆರಂಭಿಸಲಿದ್ದೇವೆ. ಇದರಲ್ಲಿ ಯಾವುದೆ ಗೊಂದಲಗಳಿಗೆ ಅವಕಾಶವೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ರವಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾದಯಾತ್ರೆಯಲ್ಲಿ ನಾಗೇಂದ್ರ ರಾಜೀನಾಮೆಯೂ ಸೇರಿತ್ತು. ಇದಲ್ಲದೆ, ಇನ್ನೂ 8-10 ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

ಪಾದಯಾತ್ರೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆಯೂ ಮಾತನಾಡಿದ್ದೇನೆ. ಮತ್ತೊಂದು ಬಾರಿಯೂ ಮಾತನಾಡುತ್ತೇನೆ. ನಾಗೇಂದ್ರ ರಾಜೀನಾಮೆ ಕೊಟ್ಟು ಆಗಿದೆ. ಮತ್ತೆ ಯಾಕೆ ಪಾದಯಾತ್ರೆ ಎಂದು ಹಲವರಲ್ಲಿ ಗೊಂದಲ ಇತ್ತು. ಅವುಗಳನ್ನೆಲ್ಲ ಬಗೆಹರಿಸಲಾಗಿದೆ. ಪಾದಯಾತ್ರೆಗೆ ವರಿಷ್ಠರ ಅನುಮತಿಯನ್ನು ಪಡೆಯಲಾಗಿದೆ ಎಂದು ವಿಜಯೇಂದ್ರ ಹೇಳಿದರು.

ಕೆಪಿಎಸ್‍ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಯನ್ನು ಬಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಒಂದು ವಾರದ ಹಿಂದೆ ಉತ್ತರ ಪ್ರದೇಶದ ಅವರ ಗ್ರಾಮಕ್ಕೆ ತೆರಳಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲಿ ಪೊಲೀಸರು ತೆರಳಿದ್ದು, ಅಲ್ಲಿಯೂ ಇರಲಿಲ್ಲ. ಈಗ ತನಿಖೆಗೆ ಹಾಜರಾಗಿದ್ದಾರೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಕ್ಕೆ ಬರಲಿ, ಯಾರೇ ದೊಡ್ಡ ವ್ಯಕ್ತಿಗಳಿದ್ದರೂ ಸತ್ಯ ಬಹಿರಂಗ ಆಗಬೇಕು ಎಂದು ಒತ್ತಾಯಿಸಿದರು.

ದಲಿತರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಕಾಂಗ್ರೆಸ್ಸಿನ ಕೆಲವು ನಾಯಕರು ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳೇ, ಹಿಂದೆ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಯವರ ಮತಗಳ್ಳತನ ಸಂಬಂಧ ಪ್ರಶ್ನೆ ಎತ್ತಿದ್ದಕ್ಕಾಗಿ 24 ಗಂಟೆಯೊಳಗೆ ಅವರ ರಾಜೀನಾಮೆ ಪಡೆದಿರಲ್ಲವೇ? ಅವತ್ತು ರಾಜಣ್ಣ ದಲಿತರು, ಪರಿಶಿಷ್ಟ ಪಂಗಡದವರೆಂದು ಕಾಂಗ್ರೆಸ್ಸಿನವರಿಗೆ ಅನಿಸಲಿಲ್ಲವೇ ಎಂದು ಪ್ರಶ್ನಿಸಿದರು.

ದಲಿತರ ಹಣ ಕೊಳ್ಳೆ ಹೊಡೆಯುವಾಗ ಡಿ.ಕೆ.ಶಿವಕುಮಾರ್ ಅವರಿಗೆ ಏನೂ ಅನಿಸಲಿಲ್ಲವೇ? ಎಸ್‍ಇಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಾಗ, ಆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಮುಖ್ಯಮಂತ್ರಿಗೆ ಅನಿಸಲಿಲ್ಲವೇ? ಆಗ ನಿಮಗೆ ದಲಿತರ ಕಾಳಜಿ ನೆನಪಾಗಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor