2027ನೇ ಸಾಲಿನ ‘ಸಾರ್ವತ್ರಿಕ ರಜಾ ದಿನಗಳ ಪಟ್ಟಿ’ ಪ್ರಕಟ
ವಾರಾಂತ್ಯದಲ್ಲಿ ಬರುತ್ತಿವೆ 5 ಪ್ರಮುಖ ಹಬ್ಬಗಳು; ಹೆಚ್ಚುವರಿ ರಜೆ ಇಲ್ಲ!
ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : ರಾಜ್ಯ ಸರಕಾರ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು ಮತ್ತು ಸರಕಾರಿ ನೌಕರರ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ.
ಶನಿವಾರ ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಶಿಷ್ಟಾಚಾರ) ಸರಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ರಾಜ್ಯಪಾಲರ ಅಧಿಸೂಚನೆ ಹೊರಡಿಸಿದ್ದಾರೆ. ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ರವಿವಾರಗಳ ಹಾಗೂ 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜೆಗಳನ್ನು 2027ನೇ ಸಾಲಿಗೆ ಮಂಜೂರು ಮಾಡಲಾಗಿದೆ.
ರಜಾ ದಿನಗಳ ಪಟ್ಟಿ:
ಅಧಿಸೂಚನೆಯ ಪ್ರಕಾರ, ಜ.15ರಂದು ಮಕರ ಸಂಕ್ರಾಂತಿ, ಜ.26ರಂದು ಗಣರಾಜ್ಯೋತ್ಸವ, ಮಾ.6ರಂದು ಮಹಾಶಿವರಾತ್ರಿ, ಮಾ.10ರಂದು ಖುತುಬ್-ಎ-ರಂಜಾನ್, ಮಾ.26ರಂದು ಗುಡ್ ಫ್ರೈಡೆ, ಏ.7ರಂದು ಯುಗಾದಿ, ಏ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮೇ 1ರಂದು ಕಾರ್ಮಿಕ ದಿನಾಚರಣೆ, ಮೇ 17ರಂದು ಬಕ್ರೀದ್, ಜೂ.16ರಂದು ಮೊಹರಂ, ಸೆ.4ರಂದು ವರಸಿದ್ಧಿ ವಿನಾಯಕ ವ್ರತ, ಸೆ.29ರಂದು ಮಹಾಲಯ ಅಮಾವಾಸ್ಯೆ, ಅ.2ರಂದು ಗಾಂಧಿ ಜಯಂತಿ, ಅ.15ರಂದು ವಾಲ್ಮೀಕಿ ಜಯಂತಿ, ಅ.28ರಂದು ನರಕ ಚತುರ್ದಶಿ, ಅ.30ರಂದು ದೀಪಾವಳಿ, ನ. 1ರಂದು ಕನ್ನಡ ರಾಜ್ಯೋತ್ಸವ ಹಾಗೂ ನ.16ರಂದು ಕನಕದಾಸ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇರಲಿದೆ.
ಈ ಪಟ್ಟಿಯಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿಲ್ಲ. ಮಹಾವೀರ ಜಯಂತಿ (ಏ.18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್ ಮಿಲಾದ್ (ಆಗಸ್ಟ್ 15), ವಿಜಯದಶಮಿ (ಅ.10) ಹಾಗೂ ಕ್ರಿಸ್ಮಸ್ (ಡಿಸೆಂಬರ್ 25) ವಾರಾಂತ್ಯದ ದಿನಗಳಲ್ಲಿ ಬರುವುದರಿಂದ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಸ್ಥಳೀಯ ರಜೆ ಮತ್ತು ಬ್ಯಾಂಕ್ ರಜೆ :
ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ 2027ರ ಸೆ.3ರಂದು ಕೈಲ್ ಮುಹೂರ್ತ, 2027ರ ಅ.18ರಂದು ತುಲಾ ಸಂಕ್ರಮಣ ಹಾಗೂ 2027ರ ಡಿ.13ರಂದು ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಇನ್ನು 2027ರ ಎ.1ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿರುವುದರಿಂದ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.
ಪರಿಮಿತ ರಜಾ ದಿನಗಳ ಪಟ್ಟಿ :
ಸರಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು ಬಳಸಿಕೊಳ್ಳಬಹುದು. 2027ರಲ್ಲಿ ಜನವರಿ 1ಕ್ಕೆ ಹೊಸ ವರ್ಷ, 2027ರ ಫೆಬ್ರವರಿ 15 ಮಧ್ವ ನವಮಿ, 2027ರ ಮಾರ್ಚ್ 5 ಜುಮಾತ್-ಉಲ್-ವಿದ), 2027ರ ಎಪ್ರಿಲ್ 15 ಶ್ರೀರಾಮನವಮಿ, 2027ರ ಮೇ 10 ರಾಮಾನುಜಾಚಾರ್ಯ ಜಯಂತಿ, 2027ರ ಮೇ 11 ಶಂಕರಾಚಾರ್ಯ ಜಯಂತಿ.
2027ರ ಮೇ 20ಕ್ಕೆ ಬುದ್ಧ ಪೂರ್ಣಿಮಾ, 2027ರ ಆಗಸ್ಟ್ 13 ವರಮಹಾಲಕ್ಷ್ಮಿ ವ್ರತ, 2027ರ ಆಗಸ್ಟ್ 16 ಋಗ್ ಉಪಾಕರ್ಮ, 2027ರ ಆಗಸ್ಟ್ 17 ಯಜುರ್ ಉಪಾಕರ್ಮ, 2027ರ ಆಗಸ್ಟ್ 24 ಶ್ರೀಕೃಷ್ಣ ಜನ್ಮಾಷ್ಟಮಿ, 2027ರ ಸೆಪ್ಟೆಂಬರ್ 3 ಸ್ವರ್ಣಗೌರಿ ವ್ರತ, 2027ರ ಸೆಪ್ಟೆಂಬರ್ 8 ಕನ್ಯಾ ಮರಿಯಮ್ಮ ಜಯಂತಿ, 2027ರ ಸೆಪ್ಟೆಂಬರ್ 14 ಅನಂತಪದ್ಮನಾಭ ವ್ರತ, 2027ರ ಸೆಪ್ಟೆಂಬರ್ 15 ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, 2027ರ ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ, 2027ರ ಅಕ್ಟೋಬರ್ 18 ತುಲಾ ಸಂಕ್ರಮಣ, 2027ರ ಡಿಸೆಂಬರ್ 13 ಹುತ್ತರಿ ಹಬ್ಬ ಹಾಗೂ 2027ರ ಡಿಸೆಂಬರ್ 24 ಕ್ರಿಸ್ಮಸ್ ಈವ್ ಪರಿಮಿತ ರಜೆಗಳು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.