ಹೋರಾಟ ಕೈಬಿಡಿ, ನಿಮ್ಮ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರಕಾರ ಬದ್ಧ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ
"ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ"
ಡಿ.ಕೆ.ಶಿವಕುಮಾರ್
ಬೆಂಗಳೂರು: ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ. ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ನಡೆಸುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತೆಯರಿಗೆ ಸೇವೆಯ ಅವಕಾಶ ಕಲ್ಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಮತ್ತು ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದ್ದಾರೆ.
ಒಬ್ಬ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಮನವಿಗೆ ಸ್ಪಂದಿಸಿ, ಹೋರಾಟವನ್ನು ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.