ಬೆಂಗಳೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸಂಪೂರ್ಣ ಪರಿಹಾರಧನ ಬಿಡುಗಡೆ ಮಾಡದಿದ್ದರೆ ಬೆಳಗಾವಿಯಲ್ಲಿ ಅಧಿವೇಶನ ಯಾವ ರೀತಿ ನಡೆಯುತ್ತದೆ ಎಂಬುದನ್ನು ವಿಪಕ್ಷವಾಗಿ ನಾವು ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಹತಾಶರಾಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನಸಿಕ ಸ್ಥೈರ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತಡಮಾಡದೆ ರೈತರಿಗೆ ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ಪರಿಹಾರಧನ ನೀಡಲು ವಿವಿಧ ಷರತ್ತುಗಳನ್ನು ವಿಧಿಸುವ ಮೂಲಕ ಸರ್ಕಾರ ವಿಳಂಬ ಮಾಡುತ್ತಿದೆ. ಬೆಳಗಾವಿ ಅಧಿವೇಶನ ಆರಂಭಕ್ಕೂ ಮೊದಲೇ 50 ಲಕ್ಷ ರೈತರಿಗೆ ಸಂಪೂರ್ಣ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

ಪರಿಹಾರ ಮೊತ್ತದ ಗೊಂದಲ ಬಗೆಹರಿಸಿ:

ಸರ್ಕಾರವೇ ಮೊದಲು 2,500 ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಈಗ 5 ಸಾವಿರ ರೂ. ಎನ್ನುತ್ತಿದೆ. ಒಂದು ಕಡೆ ಮುಖ್ಯಮಂತ್ರಿ ಪ್ರತಿ ಎಕರೆಗೆ ಇಂತಿಷ್ಟು ಪರಿಹಾರ ಎಂದು ಹೇಳಿದರೆ, ಕಂದಾಯ ಸಚಿವರು ಒಂದು ಹೆಕ್ಟೇರ್‌ಗೆ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಈ ಗೊಂದಲವನ್ನು ಸರಿಪಡಿಸಿ ರೈತರಿಗೆ 5 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ/ವಾರ್ತಾಭಾರತಿ

contributor