ಚರ್ಚೆಗೆ ಕಾರಣವಾದ ರಕ್ಷಾಬಂಧನ ಕುರಿತ ಪೋಸ್ಟ್: ಸುಧಾಮೂರ್ತಿ ಸ್ಪಷ್ಟನೆ ಏನು?
ಬೆಂಗಳೂರು: ರಾಜ್ಯಸಭೆಯ ಮಾಜಿ ಸದಸ್ಯೆ ಸುಧಾಮೂರ್ತಿ ರಕ್ಷಾಬಂಧನ ಸಂದರ್ಭದಲ್ಲಿ ಒಂದು ಸಂದೇಶವನ್ನು ಶೇರ್ ಮಾಡಿ, ಇದು ಹೇಗೆ ಮಹತ್ವದ ಹಬ್ಬ ಎನ್ನುವುದನ್ನು ವಿವರಿಸಿದ್ದರು. ಜತೆಗೆ ರಾಖಿ ಎಂಬ ನೂಲಿನ ಮೌಲ್ಯ ಎಂಥದ್ದು ಎಂದು ಬಣ್ಣಿಸಿದ್ದರು. ಈ ಹಬ್ಬದ ಹಿಂದಿನ ಕಥೆಯನ್ನೂ ಇನ್ಫೋಸಿಸ್ ಅಧ್ಯಕ್ಷರ ಪತ್ನಿ ವಿವರಿಸಿದ್ದರು. ಇದು ಎಕ್ಸ್ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಅವರ ನಿಲುವನ್ನು ಬಹಳಷ್ಟು ಮಂದಿ ಎಕ್ಸ್ ಬಳಕೆದಾರರು ವಿರೋಧಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು ನಾನು ಬೆಳೆಯುವ ಹಂತದಲ್ಲಿ ಕಲಿತ ಹಲವು ಕಥೆಗಳಲ್ಲಿ ಒಂದನ್ನು ಬಿಂಬಿಸುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
"ರಕ್ಷಾಬಂಧನ ನನಗೆ ಮಹತ್ವದ ಹಬ್ಬ. ಸಹೋದರಿ ಕಟ್ಟುವ ಈ ಪವಿತ್ರಬಂಧವು, ಎಂಥದ್ದೇ ಕಷ್ಟದ ಸಂದರ್ಭದಲ್ಲೂ ನನ್ನ ನೆರವಿಗೆ ಇರಬೇಕು ಎನ್ನುವುದರ ಸೂಚಕ" ಎಂದು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ವಿಡಿಯೊ ಸಂದೇಶದಲ್ಲಿ ಹೇಳಿದ್ದರು.
ಈ ಹಬ್ಬದ ಹಿಂದಿನ ಕಥೆಯನ್ನೂ ಸುಧಾಮೂರ್ತಿ ಬಣ್ಣಿಸಿದ್ದರು. "ರಾಣಿ ಕರ್ಣಾವತಿ (ಮೇವಾಡ) ತನ್ನ ರಾಜ್ಯಕ್ಕೆ ಅಪಾಯ ಎದುರಾದಾಗ, ಆಕೆಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಂದು ನೂಲಿನ ತುಂಡನ್ನು ಮೊಘಲ್ ರಾಜ ಹುಮಾಯೂನ್‍ಗೆ ಕಳುಹಿಸಿ, ನಾನು ಅಪಾಯದಲ್ಲಿದ್ದೇನೆ. ನಿನ್ನ ಸಹೋದರಿ ಎಂದು ನನ್ನನ್ನು ತಿಳಿ. ಬಂದು ನನ್ನನ್ನು ರಕ್ಷಿಸು" ಎಂದು ಕೇಳಿಕೊಂಡಿದ್ದಾಗಿ ಸುಧಾಮೂರ್ತಿ ವಿವರಿಸಿದ್ದರು.
ಆದರೆ ಇದನ್ನು ಅಲ್ಲಗಳೆದ ಹಲವು ಮಂದಿ ಎಕ್ಸ್ ಬಳಕೆದಾರರು, ರಕ್ಷಾಬಂಧನ ಇತಿಹಾಸ ಮಧ್ಯಕಾಲೀನ ಭಾರತದ್ದಲ್ಲ; ಮಹಾಭಾರತದಷ್ಟು ಹಿಂದಕ್ಕೆ ಹೋಗುತ್ತದೆ ಎಂದಿದ್ದರು. ಶಿಶುಪಾಲನ ವಧೆಗೆ ಶ್ರೀಕೃಷ್ಣ ಸುದರ್ಶನ ಚಕ್ರ ಪ್ರಯೋಗ ಮಾಡಿದಾಗ ತನ್ನ ಬೆರಳನ್ನೂ ಕಳೆದುಕೊಂಡ. ದ್ರೌಪದಿ ಬಟ್ಟೆ ತುಂಡಿನಿಂದ ಆ ಗಾಯಕ್ಕೆ ಕಟ್ಟಿದಳು. ಇದರಿಂದ ಸಂತುಷ್ಟನಾದ ಕೃಷ್ಣ, ಯಾವುದೇ ಸಂದರ್ಭದಲ್ಲೂ ನೆರವಿಗೆ ಬರುವ ಭರವಸೆ ನಿಡಿದ. ಕೌರವರು ವಸ್ತ್ರಾಪಹರಣಕ್ಕೆ ಮುಂದಾದಾಗ ಕೃಷ್ಣ ಕಾಪಾಡಿದ" ಎಂದು ಒಬ್ಬರು ಬಳಕೆದಾರರು ಹೇಳಿದ್ದಾರೆ.
"ರಕ್ಷಾಬಂಧನದ ಮೂಲಕ್ಕೆ ಸಂಬಂಧಿಸಿದ ಹೇಳಿದ ಕಥೆ ಇದಲ್ಲ. ಇದು ನಮ್ಮ ದೇಶದಲ್ಲಿ ಸಂಪ್ರದಾಯವಾಗಿತ್ತು ಎಂದು ಬರೆದಿದ್ದೆ. ನಾನು ಬೆಳೆಯುವಾಗ ಕೇಳಿದ ಹಲವು ಕಥೆಗಳ ಪೈಕಿ ಒಂದನ್ನು ಬಿಂಬಿಸುವುದು ನನ್ನ ಉದ್ದೇಶವಾಗಿತ್ತು" ಎಂದು ಸುಧಾಮೂರ್ತಿ ಸ್ಪಷ್ಟಪಡಿಸಿದ್ದಾರೆ.