×
Ad

ನಟ ದರ್ಶನ್‌ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಲು ಆದೇಶ

Update: 2026-05-15 12:50 IST

ನಟ ದರ್ಶನ್‌

ಹೊಸದಿಲ್ಲಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದೇ ವೇಳೆ, ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠವು, ವಿಚಾರಣೆಯನ್ನು ಇಂದಿನಿಂದಲೇ ಆದ್ಯತೆಯ ಮೇರೆಗೆ ನಡೆಸಬೇಕು ಎಂದು ಸೂಚಿಸಿದೆ. ಜೈಲಿನಲ್ಲಿ ಇತರ ಕೈದಿಗಳಿಗೆ ನೀಡಲಾಗುವಂತೆಯೇ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ದರ್ಶನ್‌ಗೂ ಒದಗಿಸಬೇಕು ಎಂದೂ ತಿಳಿಸಿದೆ.

ಮುಂದಿನ ಒಂದು ವರ್ಷದವರೆಗೆ ದರ್ಶನ್ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಬಾರದು ಎಂದು ಪೀಠ ಹೇಳಿದೆ. ಆದರೆ, ಆ ಅವಧಿಯೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಬಳಿಕ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿದೆ.

ಜೈಲಿನಲ್ಲಿನ ಅಕ್ರಮಗಳು ಹಾಗೂ ಸಹ ಕೈದಿಗಳಿಂದ ಕಿರುಕುಳ ಮತ್ತು ಬೆದರಿಕೆ ಎದುರಿಸುತ್ತಿರುವುದಾಗಿ ದರ್ಶನ್ ಪರ ವಕೀಲರು ಈ ಹಿಂದೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಇಲಾಖೆಯಿಂದ ಸುಪ್ರೀಂ ಕೋರ್ಟ್ ವರದಿ ಕೋರಿತ್ತು.

ವಿಶೇಷ ಸಾರ್ವಜನಿಕ ಅಭಿಯೋಜಕರು ಸಲ್ಲಿಸಿದ ವರದಿಯಲ್ಲಿ, ದರ್ಶನ್ ಮಾಡಿದ್ದ ಆರೋಪಗಳನ್ನು ತಳ್ಳಿಹಾಕುವ ವೀಡಿಯೊ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದಲ್ಲಿ ಒಟ್ಟು 270 ಸಾಕ್ಷಿಗಳಿದ್ದು, ಇದುವರೆಗೆ ಕೇವಲ 10 ಮಂದಿಯಷ್ಟೇ ವಿಚಾರಣೆಗೆ ಒಳಗಾಗಿದ್ದಾರೆ ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿತು. ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಉಲ್ಲೇಖಿಸಿ ದರ್ಶನ್ ಮಧ್ಯಂತರ ಜಾಮೀನು ಕೋರಿದ್ದರು. ಉಳಿದ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದರು.

ಈ ಸಂಬಂಧ ವಿವರವಾದ ವರದಿ ಪಡೆದ ಬಳಿಕ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News