×
Ad

ಕೃಷಿ ವಿವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಬೇಕು: ಸಿಎಂ ಸಿದ್ದರಾಮಯ್ಯ

"ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ"

Update: 2025-09-15 20:32 IST

ಹುಬ್ಬಳ್ಳಿ: ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಿನ ಅಧ್ಯಯನ ನಡೆಸಿ, ಪರಿಹಾರ ಹುಡುಕಿ ರೈತಸ್ನೇಹಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸೋಮವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಆಹಾರದ ಫಲವತ್ತತೆ ಕಡಿಮೆ ಆಗುತ್ತಾ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ ಎಂದು ಅವರು ಹೇಳಿದರು.

ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚೆಚ್ಚು ಅಧ್ಯಯನ ನಡೆಸಿ. ಅಗತ್ಯವಾದ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಒದಗಿಸಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯವು ಹಾಲು ಉತ್ಪಾದನೆಯಲ್ಲಿ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯದಲ್ಲೆ ಮಹಾರಾಷ್ಟ್ರ ರಾಜ್ಯವನ್ನು ಹಿಂದಿಕ್ಕಿ ನಾವೆ ನಂಬರ್ ಆದರೂ ಆಶ್ಚರ್ಯವಿಲ್ಲ. ಹೈನುಗಾರಿಕೆಯಲ್ಲಿ ನಾವು ಅಪಾರ ಪ್ರಗತಿ ಸಾಧಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅಕ್ಕಿ, ರಾಗಿ, ಗೋಧಿಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿದ್ದು ಡಯಾಬಿಟಿಕ್ ಸಮಸ್ಯೆ ಇರುವವರ ಪ್ರಮಾಣ ಹೆಚ್ಚುತ್ತಿದೆ. ಆದುದರಿಂದ, ಸಕ್ಕರೆ ಪ್ರಮಾಣ ಕಡಿಮೆ ಇರುವ ಸಿರಿಧಾನ್ಯ ಕೃಷಿಗೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯಗಳು ಪ್ರಯೋಗಾಲಯದಿಂದ ಭೂಮಿ(ಲ್ಯಾಬ್ ಟು ಲ್ಯಾಂಡ್) ಜೊತೆಗೆ ಭೂಮಿಯಿಂದ ಪ್ರಯೋಗಾಲಯ(ಲ್ಯಾಂಡ್ ಟು ಲ್ಯಾಬ್) ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದು ಕೃಷಿ ವಿವಿಗಳಿಗೆ ಅವರು ಕರೆ ನೀಡಿದರು.

ಮೊದಲೆಲ್ಲಾ ಕೃಷಿ ಚಟುವಟಿಕೆಗೆ ಪೂರಕವಾಗಿ ಗ್ರಾಮ ಸಹಾಯಕರು ಇದ್ದು ಅವರು ಗ್ರಾಮಗಳಲ್ಲೆ ನೆಲೆಸುತ್ತಿದ್ದರು. ಈಗ ಇವರ ಸಂಖ್ಯೆ ಕಡಿಮೆ ಆಗಿದ್ದು ಮತ್ತೆ ಇವರ ಪ್ರಮಾಣ ಹೆಚ್ಚಾಗುವ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

ಕೃಷಿ ಭೂಮಿಗಳು ಹೆಚ್ಚಾಗದೆ, ಕೃಷಿಯ ಪ್ರಮಾಣ ಹೆಚ್ಚಾಗದೆ ಕೇವಲ ಕೃಷಿ ವಿವಿಗಳನ್ನು ಹೆಚ್ಚಿಸಿದರೆ ಹೆಚ್ಚಿನ ಅನುಕೂಲಗಳು ಆಗುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಣ್ಣೆಹಳ್ಳಕ್ಕೆ 200 ಕೋಟಿ ರೂ. ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಕೂಡ ಆರಂಭವಾಗಲಿದೆ. ಮಳೆಹಾನಿಯಿಂದ ಆಗಿರುವ ಬೆಳೆ ಹಾನಿ ಮತ್ತು ಅನಾಹುತಗಳ ಬಗ್ಗೆ ಧಾರವಾಡ ಜಿಲ್ಲಾಡಳಿತ ಶೇ.90ರಷ್ಟು ಪ್ರಗತಿ ಪರಿಹಾರ ವರದಿ ನೀಡಿರುವುದಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಗೆ ಮುಖ್ಯಮಂತ್ರಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಯಾಸಿರ್ ಖಾನ್ ಪಠಾಣ್, ಕೋನರೆಡ್ಡಿ, ವಿಜಯಾನಂದ ಕಾಶಪ್ಪನವರ್, ಅಶೋಕ್ ಪಟ್ಟಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News