BRAHMAVARA | ಕೋಟದಲ್ಲಿ ಯುವಕರ ಮಧ್ಯೆ ಹೊಡೆದಾಟ: ಓರ್ವನ ಕೊಲೆ
ನಾಲ್ವರು ಪೊಲೀಸ್ ವಶಕ್ಕೆ
ಬ್ರಹ್ಮಾವರ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಯುವಕರ ಮಧ್ಯೆ ಹೊಡೆದಾಟ ನಡೆದು ಓರ್ವ ಕೊಲೆಯಾದ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ಸ್ ಬಳಿ ರವಿವಾರ ತಡರಾತ್ರಿ ಸಂಭವಿಸಿದೆ.
ಪಡುಕರೆ ನಿವಾಸಿ ಸಂತೋಷ್ ಮೊಗವೀರ(30) ಕೊಲೆಯಾದವರು.
ರವಿವಾರ ರಾತ್ರಿ ಮದ್ಯಪಾನ ಪಾರ್ಟಿ ಮಾಡಿದ್ದ ಯುವಕರ ತಂಡವೊಂದು ಕ್ಷುಲ್ಲಕ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ತೀವ್ರ ಹಲ್ಲೆಗೊಳಗಾದ ಸಂತೋಷ್ ಮೊಗವೀರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಿಂದ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಂತೋಷ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೋಟ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಟಿ. ಹಾಗೂ ಠಾಣಾ ಎಸ್ಸೆ ಮಾಂತೇಶ್ ಜಾಭಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.