ಎಐ ರಚಿತ ಟ್ರಂಪ್ ವೀಡಿಯೊ ಬಳಸಿ ರಾಜ್ಯದ 200 ಮಂದಿಗೆ ಎರಡು ಕೋಟಿ ರೂ. ವಂಚನೆ!
ಡೊನಾಲ್ಡ್ ಟ್ರಂಪ್ | PC : indianexpress.com
ಬೆಂಗಳೂರು: ಕೃತಕ ಬುದ್ಧಿಮತ್ತೆ(ಎಐ)ಯ ಮೂಲಕ ಸೃಷ್ಟಿಸಲಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಡಿಯೊವನ್ನು ಬಳಸಿದ ಸೈಬರ್ ಖದೀಮರು ಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕದ ಹಲವು ನಗರಗಳಲ್ಲಿ 200ಕ್ಕೂ ಅಧಿಕ ಜನರಿಗೆ ವಂಚಿಸಿದ್ದಾರೆ. ಸಂತ್ರಸ್ತರಿಗೆ ಹೆಚ್ಚಿನ ಲಾಭದ ಭರವಸೆ ನೀಡಿ ಟ್ರಂಪ್ ಹೋಟೆಲ್‌ನಲ್ಲಿ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು ಎಂದು ವರದಿಯಾಗಿದೆ.
ಪೋಲಿಸರ ಪ್ರಕಾರ ಈ ಸೈಬರ್ ಅಪರಾಧ ಪ್ರಕರಣಗಳು ಬೆಂಗಳೂರು, ತುಮಕೂರು, ಮಂಗಳೂರು ಮತ್ತು ಹಾವೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಹಾವೇರಿಯೊಂದರಲ್ಲೇ 15ಕ್ಕೂ ಅಧಿಕ ಜನರು ಹಣ ಕಳೆದುಕೊಂಡಿದ್ದಾರೆ.
ಸಂತ್ರಸ್ತರಿಗೆ ಆಕರ್ಷಕ ಪ್ರತಿಫಲ, ವರ್ಕ್-ಫ್ರಾಮ್-ಹೋಮ್ ಮತ್ತು ಹೂಡಿಕೆ ಅವಕಾಶಗಳ ಆಮಿಷವನ್ನು ಒಡ್ಡಲಾಗಿತ್ತು. ವಂಚಕರು ಆರಂಭದಲ್ಲಿ ತಮ್ಮ ಖಾತೆಗಳನ್ನು ಆರಂಭಿಸಲು 1,500 ರೂ.ಗಳನ್ನು ಪಾವತಿಸುವಂತೆ ಅವರಿಗೆ ಸೂಚಿಸಿದ್ದರು ಮತ್ತು ಕಂಪನಿ ಪ್ರೊಫೈಲ್‌ಗಳನ್ನು ಬರೆಯುವಂತಹ ಕೆಲಸಗಳನ್ನು ಅವರಿಗೆ ನೀಡಿದ್ದರು. ಪ್ರತಿಯೊಂದೂ ಕೆಲಸ ಪೂರ್ಣವಾಗುತ್ತಿದ್ದಂತೆ ಆ್ಯಪ್‌ನ ಡ್ಯಾಷ್‌ಬೋರ್ಡ್‌ನಲ್ಲಿ ಅವರ ‘ಗಳಿಕೆ’ಯು ಹೆಚ್ಚುತ್ತಿದ್ದಂತೆ ಕಂಡು ಬರುತ್ತಿತ್ತು, ಆದರೆ ಅದು ಎಂದೂ ನೈಜ ಹಣವಾಗಿರಲಿಲ್ಲ.
ಸುದ್ದಿಸಂಸ್ಥೆಯೊದಿಗೆ ಮಾತನಾಡಿದ 38ರ ಹರೆಯದ ವಕೀಲರೋರ್ವರು ಈ ವರ್ಷದ ಜ.25 ಮತ್ತು ಎ.4ರ ನಡುವೆ ತಾನು 5,93,240 ರೂ.ಗಳನ್ನು ಠೇವಣಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
‘ಈ ವರ್ಷದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಹೋಟೆಲ್‌ನಲ್ಲಿ ಹೂಡಿಕೆಗೆ ಅವಕಾಶವನ್ನು ಮುಂದಿಟ್ಟಿದ್ದ ಯೂಟ್ಯೂಬ್ ವೀಡಿಯೊವನ್ನು ನಾನು ನೋಡಿದ್ದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಅದು ಮೊಬೈಲ್ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿರ್ದೇಶಿಸಿತ್ತು. ಫಾರ್ಮ್‌ವೊಂದನ್ನು ತುಂಬುವಂತೆ ನನಗೆ ಸೂಚಿಸಲಾಗಿದ್ದು, ಅದನ್ನು ನಾನು ಮಾಡಿದ್ದೆ. ಬ್ಯಾಂಕ್ ಖಾತೆ ವಿವರಗಳು ಮತ್ತು ಐಎಸ್‌ಎಫ್‌ಸಿ ಕೋಡ್‌ನ್ನು ಸೇರಿಸುವಂತೆಯೂ ಅದು ನನಗೆ ಸೂಚಿಸಿತ್ತು. ನಂತರ ನನಗೆ 1,500 ರೂ.ಜಮೆ ಮಾಡುವಂತೆ ಸೂಚಿಸಲಾಗಿದ್ದು, ಪ್ರತಿಫಲವಾಗಿ ನನ್ನ ಪ್ರೊಫೈಲ್‌ಗೆ 30 ರೂ.ಬಂದಿತ್ತು. ಪ್ರತಿ ದಿನ ನನಗೆ 30 ರೂ.ಪಾವತಿಸಲಾಗುತ್ತಿತ್ತು ಮತ್ತು ಮೊತ್ತ 300 ರೂ.ದಾಟಿದರಷ್ಟೇ ನಾನು ಅದನ್ನು ಹಿಂದೆಗೆದುಕೊಳ್ಳಬಹುದಿತ್ತು. ಸಕಾಲದಲ್ಲಿ ನನಗೆ ಹಣ ಪಾವತಿಯಾಗುತ್ತಿತ್ತು ಮತ್ತು ಅದನ್ನು ಹಿಂದೆಗೆದುಕೊಳ್ಳಲೂ ನನಗೆ ಸಾಧ್ಯವಾಗಿತ್ತು. ಬಳಿಕ ಅವರು ಹೆಚ್ಚು ಮೊತ್ತವನ್ನು ಹೂಡಿಕೆ ಮಾಡುವಂತೆ ನನಗೆ ಸೂಚಿಸತೊಡಗಿದ್ದರು. ನಾನು 5,000 ರೂ.ಗಳಿಂದ ಆರಂಭಿಸಿದ್ದು, ಕೊನೆಯ ಬಾರಿಗೆ ಒಂದು ಲಕ್ಷ ರೂ.ಗಳನ್ನು ಪಾವತಿಸಿದ್ದೆ. ಅಂತಿಮವಾಗಿ ಅವರು ಹಣವನ್ನು ಹಿಂದೆಗೆದುಕೊಳ್ಳಲು ತೆರಿಗೆಗಳನ್ನು ಪಾವತಿಸುವಂತೆ ನನಗೆ ತಿಳಿಸಿದ್ದರು. ಆದರೆ ನಂತರ ಅವರು ನನಗೆ ಹಣವನ್ನು ಮರಳಿಸಲಿಲ್ಲ ’ ಎಂದು ವಕೀಲರು ತಿಳಿಸಿದರು.
‘ಕೆಲವು ಸಂದರ್ಭಗಳಲ್ಲಿ ಅವರು ಒಂದು ಲಕ್ಷ ರೂ.ಹೂಡಿಕೆ ಮಾಡುವಂತೆ ಮತ್ತು ಪ್ರತಿಫಲವಾಗಿ 24 ಗಂಟೆಗಳಲ್ಲಿ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ನನಗೆ ಆಮಿಷವೊಡ್ಡಿದ್ದರು. ಪೊಲೀಸ್ ಮತ್ತು ಸರಕಾರಿ ಇಲಾಖೆಗಳಲ್ಲಿಯ ಹಲವರು ಹಾಗೂ ಓರ್ವ ಉದ್ಯಮಿ ಹಣವನ್ನು ಕಳೆದುಕೊಂಡಿದ್ದಾರೆ ಎನ್ನುವುದು ನನಗೆ ತಿಳಿದಿದೆ’ ಎಂದರು.
ವಕೀಲರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಹಾವೇರಿ ಸೆನ್ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಕೃಪೆ: indianexpress.com