ಪ್ರತಿನಿತ್ಯ 10 ಲಕ್ಷ ಜನರ ಸಮೀಕ್ಷೆ ನಡೆಸುವ ಗುರಿ: ಸಚಿವ ಶಿವರಾಜ್ ತಂಗಡಗಿ
ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಂತ-ಹಂತವಾಗಿ ಚುರುಕುಗೊಳ್ಳುತ್ತಿದ್ದು, ಮೂರು ದಿನಗಳಲ್ಲಿ 1.93ಲಕ್ಷ ಮಂದಿ ಸಮೀಕ್ಷೆ ನಡೆಸಲಾಗಿದೆ. ಪ್ರತಿದಿನ ಸರಾಸರಿ 10 ಲಕ್ಷ ಜನರ ಸಮೀಕ್ಷೆ ನಡೆಸುವ ಗುರಿಯಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಮೀಕ್ಷೆಯ ಆಪ್ ಮತ್ತು ಸರ್ವರ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಶೀಘ್ರ ಇತ್ಯರ್ಥಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಎಲ್ಲ ತೊಂದರೆಗಳು ನಿವಾರಣೆಯಾಗಲಿವೆ. ಹೀಗಾಗಿ ಸಮೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸರಕಾರದ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ ಸಮೀಕ್ಷೆ ಮಾಡಲಾಗುತ್ತಿದೆ. ಇದು ಜಾತಿ ಜನಗಣತಿಯಲ್ಲ, ಬದಲಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಹೀಗಾಗಿಯೇ ಸಿದ್ಧಪಡಿಸಿರುವ 60 ಪ್ರಶ್ನೆಗಳಲ್ಲಿ ಜಾತಿಯೂ ಒಂದು. ಉಳಿದ 59 ಮಹತ್ವದ ಪ್ರಶ್ನೆಗಳ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ? ಎಂದು ಶಿವರಾಜ್ ತಂಗಡಗಿ ಪ್ರಶ್ನಿಸಿದರು.
ವಿಪಕ್ಷಗಳಿಗೆ ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ. ರಾಜ್ಯದಲ್ಲಿ ಎರಡೂವರೆ ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಜನ ಸಮೃದ್ಧಿಯಾಗಿದ್ದಾರೆ, ಕಾಂಗ್ರೆಸ್ ಪರವಾದ ಒಲವು ಹೊಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾದರೆ ಅದರಿಂದ ಮತ್ತಷ್ಟು ಸೌಲಭ್ಯಗಳು ಸಿಕ್ಕರೆ, ಜನ ಕಾಂಗ್ರೆಸ್‍ನತ್ತ ವಾಲುತ್ತಾರೆಂಬ ಆತಂಕದಿಂದ ಬಿಜೆಪಿಯವರು ದಿನ ಬೆಳಗಾದರೆ ಸಮೀಕ್ಷೆಯ ಬಗ್ಗೆ ಸಲ್ಲದ ಟೀಕೆ ಮಾಡಲು ಆರಂಭಿಸಿದ್ದಾರೆ ಎಂದು ಅವರು ತಿರುಗೇಟು ನೀಡಿದರು.