×
Ad

ಲಂಚಕ್ಕೆ ಬೇಡಿಕೆ ಆರೋಪ: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2023-09-14 22:51 IST

ಬೆಂಗಳೂರು, ಸೆ.14: ಬೆಂಗಳೂರಿನ ವಯ್ಯಾಲಿಕಾವಲ್ ಬಾರ್ ಮತ್ತು ರೆಸ್ಟೊರೆಂಟ್‍ನಲ್ಲಿ ನಡೆದಿದ್ದ ಗಲಾಟೆ ಸಂಬಂಧ ಪ್ರಕರಣ ಮುಕ್ತಾಯಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರ ಐಪಿಎಸ್ ಅಧಿಕಾರಿಯ ವಿರುದ್ಧ ವಿಚಾರಣೆಗೆ ಪರಿಗಣಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಲೋಕಾಯುಕ್ತ ವಿಚಾರಣಾ ನ್ಯಾಯಾಲಯವು ಸಂಜ್ಞೆಯನ್ನು ಪರಿಗಣಿಸಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್ ಪ್ರಕರಣ ರದ್ದುಪಡಿಸಿದೆ.

ಆದರೆ, ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕ ವಿಚಾರಣೆಗೆ ಪರಿಗಣಿಸಲು ವಿಚಾರಣಾ ನ್ಯಾಯಾಲಯ ಸ್ವತಂತ್ರವಾಗಿರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಆರೋಪ ಸಂಬಂಧ ದಾಖಲಾಗಿದ್ದ ಎಫ್‍ಐಆರ್‍ನಲ್ಲಿ ಅರ್ಜಿದಾರ ಅಲೋಕ್ ಕುಮಾರ್ ಅವರ ಹೆಸರು ಉಲ್ಲೇಖವಾಗಿಲ್ಲ. ಜೊತೆಗೆ, ಬಾರ್‍ನಲ್ಲಿ ನಡೆದ ಗಲಾಟೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಲೋಕಾಯುಕ್ತ ಪೆÇಲೀಸರು ಬಿ ವರದಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ರದ್ದು ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?: ರೌಡಿಶೀಟರ್ ಆಗಿದ್ದ ಫೈಟರ್ ರವಿ ಮತ್ತವರ ಆಪ್ತರು ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆರೆಂಜ್ ಬಾರ್‍ನಲ್ಲಿ ಮದ್ಯ ಸೇವಿಸುವ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಈ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣವನ್ನು ಮುಕ್ತಾಯಗೊಳಿಸಲು ವೈಯಾಲಿ ಕಾವಲ್‍ನ ಪೊಲೀಸ್ ಅಧಿಕಾರಿಗಳು ಪ್ರಾರಂಭದಲ್ಲಿ 5 ಲಕ್ಷ ರೂ. ಬಳಿಕ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಫೈಟರ್ ರವಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಿ ರಿಪೋರ್ಟ್ ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯವು ಅಲೋಕ್ ಕುಮಾರ್ ವಿರುದ್ಧ ಸಂಜ್ಞೆಯನ್ನು ಪರಿಗಣಿಸಿ ವಿಚಾರಣೆ ಮುಂದುವರಿಸಿತ್ತು. ಇದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News