ಡಿ.20 ರಂದು ವಾರ್ತಾ ಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿಗೆ ನಟ ಪ್ರಕಾಶ್ ರಾಜ್, ಸಿದ್ಧಾರ್ಥ್ ವರದರಾಜನ್, ಸ್ಪೀಕರ್ ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ
ಕಲಬುರಗಿ: 'ವಾರ್ತಾ ಭಾರತಿ' ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ, 23ನೇ ವಾರ್ಷಿಕ ವಿಶೇಷಾಂಕ, ಆಯ್ದ ಸಂಪಾದಕೀಯಗಳ ಸಂಗ್ರಹ ಹಾಗೂ ಕಲ್ಯಾಣ ಕರ್ನಾಟಕ ವಿಶೇಷ ಪುರವಣಿಗಳ ಬಿಡುಗಡೆಯ ನಿಮಿತ್ತ ಡಿ.20ರಂದು ಬಹುಭಾಷಾ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ.
ಶನಿವಾರ ಬೆಳಗ್ಗೆ 10.30ಕ್ಕೆ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಡಾ.ಯು.ಟಿ ಖಾದರ್ ಅವರು ಉದ್ಘಾಟಿಸಲಿದ್ದು, ಕಲ್ಯಾಣ ಕರ್ನಾಟಕ ಆವೃತ್ತಿಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಪತ್ರಕರ್ತ , 'thewire.in' ಪ್ರಧಾನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರು 23ನೆ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಲಿದ್ದಾರೆ.
ಆಯ್ದ ಸಂಪಾದಕೀಯಗಳ ಸಂಗ್ರಹವನ್ನು ಖ್ಯಾತ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಬಿಡುಗಡೆಗೊಳಿಸಲಿದ್ದಾರೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಲ್ಯಾಣ ಕರ್ನಾಟಕ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಎನ್.ಎಸ್.ಬೋಸರಾಜು, ರಹೀಮ್ ಖಾನ್, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿಆರ್ ಪಾಟೀಲ್, ಸಂಸದ ಜಿ.ಕುಮಾರ ನಾಯಕ, ಕೆಕೆಆರ್ ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಅಜಯ ಸಿಂಗ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಖಾಜಾ ಬಂದಾ ನವಾಝ್ ದರ್ಗಾದ ಸಜ್ಜಾದಾ ನಶೀನ್ ಹಝರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಶಾಸಕಿ ಕನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಎಸ್. ಕೆ ಕಾಂತ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮೀಜಿ, ಕಲಬುರಗಿ ಬಿಷಪ್ ಪೂಜ್ಯ ರಾಬರ್ಟ್ ಮಿರಾಂಡ, ಆಣದೂರಿನ ಪೂಜ್ಯ ಭಂತೆ ವರಜ್ಯೋತಿ, ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ರೈತ ಸಂಘದ ಮುಖಂಡ ಚಾಮರಸ ಮಾಲಿಪಾಟೀಲ್, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ ಸಾಗರ್, ಹೋರಾಟಗಾರ, ಗಾಯಕ ಅಂಬಣ್ಣ ಆರೋಲಿಕರ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ದುಬೈ ಸಿಎಚ್ಎಸ್ ಗ್ರೂಪ್ ನ ಅಧ್ಯಕ್ಷ ನಾಸಿರ್ ಸಯ್ಯದ್, ಸೌದಿ ಅರೇಬಿಯಾದ ಅಲ್ ಮುಝೈನ್ ನ ಸಿಇಒ ಝಕರಿಯಾ ಜೋಕಟ್ಟೆ, ಬೆಂಗಳೂರಿನ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಾರ್ತಾ ಭಾರತಿ ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ ಪ್ರಾಸ್ತಾವಿಕ, ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಅವರು ಆಶಯ ಮಾತುಗಳನ್ನು ಆಡಲಿದ್ದಾರೆ.
ಮಾಧ್ಯಮ ಕಮ್ಯುನಿಕೇಶನ್ಸ್ ಅಧ್ಯಕ್ಷ ಎಚ್.ಎಂ. ಅಪ್ರೋಝ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.