ಆರ್ಟ್ ಆಫ್ ಲಿವಿಂಗ್‍ನಿಂದ ದಲಿತರ 150 ಎಕರೆ ಭೂಮಿ ಕಬಳಿಕೆ ಆರೋಪ: ತನಿಖೆಗೆ ಎಸ್‍ಐಟಿ ರಚಿಸಿದ ರಾಜ್ಯ ಸರಕಾರ

Update: 2026-07-21 19:05 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ದಕ್ಷಿಣ ತಾಲೂಕು ವ್ಯಾಪ್ತಿಯ ಕಗ್ಗಲೀಪುರ ಸುತ್ತಮುತ್ತಲಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ 150 ಎಕರೆ ಭೂಮಿಯನ್ನು ವ್ಯವಸ್ಥಿತವಾಗಿ ರವಿಶಂಕರ್ ಗುರೂಜಿ ಸ್ಥಾಪಿದ ‘ಆರ್ಟ್ ಆಫ್ ಲಿವಿಂಗ್ ಫೌಂಡೇಶನ್’ ಹಾಗೂ ಅದರ ಅಂಗ ಸಂಸ್ಥೆಗಳು ಕಬಳಿಕೆ ಮಾಡಿದೆ ಎನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಿ ಮೂರು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ ಅವರ ಅಧೀನದಲ್ಲಿ 270 ಎಕರೆ ಭೂಮಿ ಇದೆ. ಅದರಲ್ಲಿ 150 ಎಕರೆ ಭೂಮಿ ಎಸ್‍ಸಿ-ಎಸ್‍ಟಿ ಸಮುದಾಯದ ಜನರಿಗೆ ಸೇರಿದ ಭೂಮಿ ಆಗಿದೆ ಎಂದು ಪ್ರಸ್ತಾಪಿಸಲಾಯಿತು.

ಇದಕ್ಕೆ ಉತ್ತರಿಸಿದ ಡಾ.ಜಿ.ಪರಮೇಶ್ವರ್, ‘ಈ ಬಗ್ಗೆ ಹಿಂದೆಯೂ ಅನೇಕ ದೂರುಗಳು ಬಂದಿದ್ದವು. ಆ ದೂರುಗಳನ್ನು ಆಧರಿಸಿ ಪರಿಶೀಲಿಸಲು, ಕಂದಾಯ ಇಲಾಖೆಯಲ್ಲಿ ಎಸ್‍ಐಟಿ ರಚಿಸಲಾಗಿದೆ. ದಲಿತರಿಗೆ ಸೇರಿದ 150 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬುದನ್ನು ಎಸ್‍ಐಟಿ ಪರಿಶೀಲನೆ ಮಾಡಲಿದೆ. ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಎಸ್‍ಐಟಿ ತನಿಖೆ ನಡೆಯಲಿದೆ ಎಂದು ಹೇಳಿದರು.

ಆದೇಶದಲ್ಲಿ ಏನಿದೆ?: 1981ರಲ್ಲಿ ಸ್ಥಾಪಿತವಾದ ‘ದಿ ಆರ್ಟ್ ಆಫ್ ಲಿವಿಂಗ್' ಟ್ರಸ್ಟಿಗಳು ಮತ್ತು ಇತರ ವ್ಯಕ್ತಿಗಳು, ಸರಕಾರಿ ಗುತ್ತಿಗೆ ಹಾಗೂ ಮಂಜೂರಾತಿ ಪಡೆದವರೊಂದಿಗೆ ಒಪ್ಪಂದಗಳ ಮೂಲಕ ಸುಮಾರು 290 ಎಕರೆಗೂ ಹೆಚ್ಚು ಸರಕಾರಿ ಗೋಮಾಳ ಜಮೀನನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಾತ್ರವಲ್ಲದೆ, ಕಗ್ಗಲಿಪುರದ ಸರ್ವೇ ಸಂಖ್ಯೆ 46 ರಲ್ಲಿನ 41 ಎಕರೆ ಸರಕಾರಿ ಗೋಮಾಳ ಜಮೀನನ್ನು 1985ರಲ್ಲಿ ವಾರ್ಷಿಕ ಎಕರೆಗೆ ಕೇವಲ 500 ರೂ.ಗಳ ಅತ್ಯಂತ ಕಡಿಮೆ ದರದಲ್ಲಿ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿಯು 2015ರಲ್ಲೇ ಮುಕ್ತಾಯಗೊಂಡಿದ್ದರೂ, ಸಂಸ್ಥೆಯು ಅಕ್ರಮವಾಗಿ ಜಮೀನನ್ನು ತನ್ನ ವಶದಲ್ಲೇ ಇಟ್ಟುಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.

ಹಾಗೆಯೇ ಬಿ.ಎಂ.ಕಾವಲ್‍ನ ಸರ್ವೇ ಸಂಖ್ಯೆ. 135 ರಲ್ಲಿದ್ದ 19 ಎಕರೆ ಜಮೀನಿನನ್ನು ಗೋಮಾಳದಿಂದ ಕಡಿತಗೊಳಿಸಿ 30 ವರ್ಷಗಳ ಅವಧಿಗೆ ಮತ್ತೊಂದು ಗುತ್ತಿಗೆಯನ್ನು ನೀಡಲಾಗಿದೆ. ಅದೇ ರೀತಿ, ಸರ್ವೆ ಸಂಖ್ಯೆ 46ರಲ್ಲಿನ ಕೆರೆಯನ್ನು ಒಳಗೊಂಡಂತೆ ಬಹಳ ವಿಶಾಲವಾದ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಜತೆಗೆ, ಬಂಡೆ ಖರಾಬು, ಕಾಲುದಾರಿ ಜಮೀನು ಒತ್ತುವರಿ ಮಾಡಿಕೊಂಡು ನೈಸರ್ಗಿಕ ಸ್ವರೂಪವನ್ನೆ ಬದಲಾವಣೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

11 ಅಧಿಕಾರಗಳ ತಂಡ: ವಿಶೇಷ ತನಿಖಾ ತಂಡದ ಅಧ್ಯಕ್ಷರಾಗಿ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಜೆ.ಗದ್ಯಾಲ್, ಜಯಮಾಧವ್, ನಿಸಾರ್ ಅಹ್ಮದ್, ನೇಗಿನಹಾಳ್, ಗಿರೀಶ್ ನಂದನ್, ವಿಶ್ವನಾಥ್, ಕಲಿಮುಲ್ಲಾ, ಸುಮಂತ್, ಶಶಾಂಕ್, ಚರಣ್ ರಾಜ್ ಅವರನ್ನ ನೇಮಿಸಲಾಗಿದೆ.

ಎಸ್‍ಐಟಿ ಕರ್ತವ್ಯ: ಜಮೀನು ಮಂಜೂರಾತಿ ದಾಖಲೆಗಳು, ಮೂಲ ವಾರಸುದಾರರ ವಿವರಗಳು ಮತ್ತು ನಕಲಿ ದಾಖಲೆಗಳ ಸೃಷ್ಟಿ ಅಥವಾ ವಂಚನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುವುದು.

-ಸಾರ್ವಜನಿಕ ರಸ್ತೆಗಳು, ಜಲಮೂಲಗಳು, ಗುಡ್ಡಗಳು, ‘ಬಂಡೆ ಖರಾಬು' ಜಮೀನುಗಳ ಗಡಿಗಳನ್ನು ನಿಖರವಾಗಿ ಗುರುತಿಸುವುದು.

-ಆರೋಪಿತ ಸಂಸ್ಥೆಯಾದ ಆರ್ಟ್ ಆಫ್ ಲಿವಿಂಗ್ ಮತ್ತು ಇತರ ಪ್ರತಿವಾದಿಗಳಿಗೆ ತಮ್ಮ ವಿವರಣೆ ನೀಡಲು ಸೂಕ್ತ ಅವಕಾಶ ಒದಗಿಸುವುದು.

-ವಿವಿಧ ಗುತ್ತಿಗೆ ಒಪ್ಪಂದಗಳ ಉಲ್ಲಂಘನೆಗಳನ್ನು ಗುರುತಿಸುವುದು ಮತ್ತು ಉಪಗ್ರಹ ದತ್ತಾಂಶಗಳನ್ನು ಬಳಸಿಕೊಂಡು ಪರಿಸರಕ್ಕೆ ಆಗಿರುವ ಹಾನಿಯನ್ನು ಅಂದಾಜಿಸುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News