ಬೆಂಗಳೂರಿನಲ್ಲಿ 17 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ; 15.29 ಕೋಟಿ ರೂ.ಮೌಲ್ಯದ ಮಾದಕ ವಸ್ತು ಜಪ್ತಿ
ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಬೆಂಗಳೂರು ನಗರ ಪೊಲೀಸರು ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ ಹಾಗೂ ಹೆರಾಯಿನ್, ಎಂಡಿಎಂಎ ಮಾರಾಟ ಮಾಡುವ ಬೃಹತ್ ಜಾಲವನ್ನು ಪತ್ತೆ ಹಚ್ಚಿದ್ದು, ಒಬ್ಬ ವಿದೇಶಿ ಪ್ರಜೆ, ಓರ್ವ ಮಹಿಳೆ ಸೇರಿ ಒಟ್ಟು 17 ಮಂದಿ ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 15.29 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸಿಸಿಬಿ ಪೊಲೀಸರು 12 ಕೆ.ಜಿ. 925 ಗ್ರಾಂ ಎಂಡಿಎಂಎ, 60 ಗ್ರಾಂ ಕೊಕೋನ್, 33 ಕೆ.ಜಿ. 270 ಗ್ರಾಂ ಗಾಂಜಾ, 7 ಕೆ.ಜಿ. ಅಫೀಮು, 225 ಗ್ರಾಂ ಮೆಫೆಡ್ರೋನ್, 6 ಮೊಬೈಲ್ ಫೋನ್, ಒಂದು ಕಾರು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಚಾಮರಾಜಪೇಟೆ ಪೊಲೀಸರು 116.3 ಗ್ರಾಂ ಕೊಕೇನ್, ಕೋರಮಂಗಲ ಪೊಲೀಸರು 157 ಗ್ರಾಂ ಹೆರಾಯಿನ್, ಬಾಣಸವಾಡಿ ಪೊಲೀಸರು 240 ಗ್ರಾಂ ಎಂಡಿಎಂಎ, ವೈಟ್‍ಫೀಲ್ಡ್ ಪೊಲೀಸರು 12 ಕೆ.ಜಿ. ಗಾಂಜಾ, ಮಲ್ಲೇಶ್ವರಂ ಪೊಲೀಸರು 9 ಕೆ.ಜಿ. 960 ಗ್ರಾಂ ಗಾಂಜಾ, ಪುಲಿಕೇಶಿ ನಗರ ಪೊಲೀಸರು 5 ಗ್ರಾಂ ಕೊಕೇನ್, 4 ಕೆ.ಜಿ. 92 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಓರ್ವ ವಿದೇಶಿ ಪ್ರಜೆ, ಒಬ್ಬ ಮಹಿಳೆ ಸೇರಿ 10 ಅನ್ಯ ರಾಜ್ಯದವರು ಹಾಗೂ 6 ಜನ ಸ್ಥಳೀಯ ಆರೋಪಿಗಳ ಸಹಿತ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು, ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿದ್ದಾರೆ.