‘ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು’: ದಿಲ್ಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ನಟ ಯುವ ರಾಜ್‌ಕುಮಾರ್ ಪೋಸ್ಟ್
"ಅನ್ಯಾಯದ ವಿರುದ್ಧ ಮೌನ ವಹಿಸುವುದೇ ದೇಶಕ್ಕೆ ದೊಡ್ಡ ಬೆದರಿಕೆ"
ಯುವ ರಾಜ್‌ಕುಮಾರ್ (PC : FB/Yuva Rajkumar)
ಬೆಂಗಳೂರು : ದಿಲ್ಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಕುರಿತು ಕನ್ನಡದ ನಟ ಯುವರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಘಟನೆಯನ್ನು ರಾಜಕೀಯದ ದೃಷ್ಟಿಯಿಂದ ನೋಡುವ ಬದಲು ಮಾನವೀಯತೆಯ ನೆಲೆಯಲ್ಲಿ ಚರ್ಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಒಂದು ರಾಷ್ಟ್ರಕ್ಕೆ ದೊಡ್ಡ ಬೆದರಿಕೆ ಅಸಮಾಧಾನವಲ್ಲ; ನೋವು ಮತ್ತು ಅನ್ಯಾಯದ ವಿರುದ್ಧ ಮೌನ ವಹಿಸುವುದೇ ದೊಡ್ಡ ಬೆದರಿಕೆ ಎಂದು ಹೇಳಿರುವ ಅವರು, ಇದು ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧದ ವಿಷಯವಲ್ಲ; ಮಾನವೀಯತೆಯನ್ನು ಆಯ್ಕೆ ಮಾಡುವ ಸಂದರ್ಭ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆ ದೇಶದ ಗಮನ ಸೆಳೆದಿರುವ ಬೆಳವಣಿಗೆಯಾಗಿದೆ. ಈ ಕುರಿತು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ನಿರ್ಲಕ್ಷಿಸಬಾರದು ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಹೊಣೆ ಯಾರದ್ದು, ಇದನ್ನು ತಡೆಯಲು ಸಾಧ್ಯವಿತ್ತೇ, ವಿದ್ಯಾರ್ಥಿಗಳು ಏಕೆ ಗಾಯಗೊಂಡರು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಪಾಠಗಳನ್ನು ಕಲಿಯಬೇಕು ಎಂಬ ಪ್ರಶ್ನೆಗಳನ್ನು ಯುವರಾಜ್ ಕುಮಾರ್ ಮುಂದಿಟ್ಟಿದ್ದಾರೆ.
ಪ್ರತಿಯೊಬ್ಬ ನಾಗರಿಕನೂ ತಿಳುವಳಿಕೆಯುಳ್ಳವನಾಗಿರಬೇಕು. ಸ್ಥಳೀಯ ಧ್ವನಿಗಳನ್ನು ಆಲಿಸಬೇಕು, ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು, ಕಠಿಣ ಪ್ರಶ್ನೆಗಳನ್ನು ಕೇಳಬೇಕು ಹಾಗೂ ಸ್ವತಂತ್ರವಾಗಿ ಯೋಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ರಾಜಕೀಯಕ್ಕಿಂತ ಮೊದಲು ಸಹಾನುಭೂತಿ, ಪ್ರಚಾರಕ್ಕಿಂತ ಮೊದಲು ಸತ್ಯ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆ ಇರಬೇಕು ಎಂದು ಹೇಳಿರುವ ಅವರು, ರಾಜಕೀಯಕ್ಕಿಂತ ಮಾನವೀಯತೆ, ಪ್ರಚಾರಕ್ಕಿಂತ ಸತ್ಯ ಮತ್ತು ಭಯಕ್ಕಿಂತ ಧ್ವನಿ ದೊಡ್ಡದು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.