ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ: ಲೋಕಭವನದಲ್ಲಿ ಸಿದ್ಧತೆ ಆರಂಭ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿದ್ದು, ಇದರ ನಡುವೆ ಲೋಕಭವನದ ಆವರಣದಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಗಳು ಭರದಿಂದ ನಡೆಯುತ್ತವೆ.
ಬುಧವಾರ(ಜು.22) ಸಂಜೆ ಅಥವಾ ಗುರುವಾರ ದಿನದಂದು ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಇದಕ್ಕಾಗಿ ಲೋಕಭವನದ ಆವರಣದಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಗಳು ನಡೆಯುತ್ತಿವೆ.
ಪ್ರಮುಖವಾಗಿ ಲೋಕಭವನದ ಮುಂಭಾಗ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಶಾಮಿಯಾನ, ಆಸನ ವ್ಯವಸ್ಥೆ ಸೇರಿದಂತೆ ವೇದಿಕೆ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಇದರಿಂದ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ.
ಈ ಕುರಿತು ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ಮೊದಲಿಗೆ ಮಂಗಳವಾರ ರಾತ್ರಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಸಭೆ ನಡೆಯಬೇಕಿತ್ತು. ಆ ಸಭೆಯಲ್ಲಿ ಸುಮಾರು 20 ಮಂದಿ ಹೊಸ ಸಚಿವರ ಪಟ್ಟಿಗೆ ಅಂತಿಮ ಒಪ್ಪಿಗೆ ದೊರೆಯಲಿದೆ ಎಂಬ ನಿರೀಕ್ಷೆ ಇತ್ತು.
ಸಭೆ ಯಶಸ್ವಿಯಾಗಿ ನಡೆದಿದ್ದರೆ, ಬುಧವಾರ ಹೊಸ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಸುವ ಯೋಜನೆಯೂ ಇತ್ತು. ಆದರೆ ಹೊಸದಿಲ್ಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ಕೇಂದ್ರ ಸರಕಾರದ ನಡೆಯಿಂದ ಉಲ್ಬಣಗೊಂಡಿರುವ ರಾಜಕೀಯ ಬೆಳವಣಿಗೆಗಳಿಂದ ಈ ಪ್ರಕ್ರಿಯೆಗೆ ತಾತ್ಕಾಲಿಕ ಅಡ್ಡಿಯಾಗಿದೆ ಎಂದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯ ಹಿನ್ನೆಲೆ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಹೈಕಮಾಂಡ್ ಸಭೆ ನಿಗದಿತ ಸಮಯದ ಬದಲು ತಡವಾಗುವ ಸಾಧ್ಯತೆ ಇದೆ. ಹೀಗಾಗಿ ಸಚಿವರ ಪಟ್ಟಿಯೂ ವಿಳಂಬವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಮಂಗಳವಾರ) ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.