×
Ad

ಮುಂಗಾರು ಅಧಿವೇಶನ | ಶೀಘ್ರದಲ್ಲೇ ಬಿ-ಖಾತಾ ವಿತರಣೆ : ಸಚಿವ ಪ್ರಿಯಾಂಕ್ ಖರ್ಗೆ

Update: 2025-08-13 17:52 IST

ಬೆಂಗಳೂರು, ಆ. 13: ಇನ್ನು ಒಂದೂವರೆ ತಿಂಗಳಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-11 ‘ಬಿ’ ಖಾತೆಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ 29 ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಇನ್ನು 15 ದಿನಗಳಲ್ಲಿ ನಿಯಮಗಳನ್ನು ರೂಪಿಸಲಾಗುವುದು. ಸದ್ಯಕ್ಕೆ ನಮೂನೆ 11-ಬಿ ಖಾತೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು ವರ್ಷದಲ್ಲಿ 1,237 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದು ದೇಶದಲ್ಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಗ್ರಹಿಸಿದ ಅತಿಹೆಚ್ಚು ತೆರಿಗೆಯಾಗಿದೆ. ಈ ತೆರಿಗೆ ಹಣವನ್ನು ಪಂಚಾಯ್ತಿಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು. ಇ-ಸ್ವತ್ತು ಸಮಸ್ಯೆಗಳ ಸುಧಾರಣೆಗೆ ಸಮಿತಿ ರಚಿಸಲಾಗಿದೆ. ಅಲ್ಲದೆ ದಿಶಾಂಕ ಆಪ್ ಲೋಪದೋಷಗಳನ್ನು ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈಕ್ರೋ ಗ್ರಿಡ್: ಎಲ್ಲ ಪಂಚಾಯ್ತಿಗಳಲ್ಲೂ ಮೈಕ್ರೋಗ್ರಿಡ್ ಪರಿಕಲ್ಪನೆ ಜಾರಿಗೆ ತಂದು ವಿದ್ಯುತ್ ಖರೀದಿಸಲಾಗುವುದು. ಈ ಮೈಕ್ರೋಗ್ರಿಡ್ ವಿನೂತನ ಯೋಜನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆಂಡರ್ ಕರೆಯಲಾಗಿದೆ. ಈ ಯೋಜನೆಯಡಿ ಬೀದಿ ದೀಪ, ಪಂಚಾಯ್ತಿ ಕಚೇರಿಗಳಿಗೆ ವಿದ್ಯುತ್ ಬಳಕೆ ಮಾಡಿ ಉಳಿದ ವಿದ್ಯುತ್‍ನ್ನು ಗ್ರಿಡ್‍ಗೆ ಒಪ್ಪಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ, ಬಿಜೆಪಿ ಸದಸ್ಯ ಐಹೊಳೆ ದುರ್ಯೋಧನ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ರಸ್ತೆ ದುರಸ್ತಿ ಶಾಸಕರ ವಿವೇಚನೆಗೆ: ಪ್ರಿಯಾಂಕ್ ಖರ್ಗೆ

ನಿಯಮಾವಳಿಗಳನ್ನು ಸರಳೀಕರಣ ಮಾಡಿ ಗ್ರಾಮೀಣ ರಸ್ತೆ ದುರಸ್ತಿಗೆ ಅನುದಾನ ನೀಡಲಾಗುವುದು. 15 ರಿಂದ 18 ಕಿ.ಮೀ ರಸ್ತೆಯನ್ನು ಶಾಸಕರ ವಿವೇಚನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಜಗದೀಶ್ ಗುಡಗುಂಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲೆಗೆ ಹೋಗಲು ದಾರಿ ಇಲ್ಲದಿದ್ದರೆ ದಾರಿ ವ್ಯವಸ್ಥೆ ಮಾಡಿಕೊಡಲಾಗುವುದು. ನಮ ಹೊಲ-ನಮ್ಮ ರಸ್ತೆ ಯೋಜನೆ ಆರೇಳು ವರ್ಷಗಳಿಂದ ಸ್ಥಗಿತವಾಗಿದೆ. ಸಿಎಂ ಅನುದಾನ ಒದಗಿಸುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಜಗದೀಶ್ ಗುಡಗುಂಟಿ, ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳು ಓಡಾಡದಂತಾಗಿದೆ. ಗರ್ಭಿಣಿಯರನ್ನು ಹೆರಿಗೆಗೆ ಜೋಳಿಗೆಯಲ್ಲಿ ಕರೆದೊಯ್ಯಬೇಕಾದ ಸ್ಥಿತಿ ಇದೆ. ಜನರು ಶಾಪ ಹಾಕುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಕೊಂಡೊಯ್ಯಲು ಸೂಕ್ತ ರಸ್ತೆ ಇಲ್ಲ. 10ಕೋಟಿ ರೂ.ಅನುದಾನ ನೀಡಬೇಕೆಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News