ಅದಕ್ಷತೆ, ಸ್ವಜನಪಕ್ಷಪಾತದಿಂದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ : ಯತ್ನಾಳ್
ಬೆಂಗಳೂರು : ಅದಕ್ಷತೆ, ಸ್ವಜಪಕ್ಷಪಾತ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮನ್ವಯದ ಕೊರತೆ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ವಿಧಾನ ಪರಿಷತ್ ಚುನಾವಣೆಯ ಹೀನಾಯ ಸೋಲಿನಿಂದ ನಗೆಪಾಟಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷರ ತಂಡವು ನಾನು ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದೇನೆ ಎಂಬ ಸುಳ್ಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ತಮಗೆ ನೀಡಿದ ಜವಾಬ್ಧಾರಿಯಲ್ಲಿ ವಿಫಲರಾದ ‘ಅಡ್ಜಸ್ಟ್ ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬ ಗಾದೆ ಮಾತಿನಂತೆ ಕೊಟ್ಟ ಕೆಲಸವನ್ನು ಮಾಡದೇ ಬೇರೆ ನಾಯಕರ ಮೇಲೆ ತಪ್ಪು ಹೊರೆಸುವ ಕಾಯಕದಲ್ಲಿ ‘ಅಡ್ಜಸ್ಟ್ ಮೆಂಟ್’ ಗಿರಾಕಿಗಳು ನಿರತರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಮತ ಚಲಾಯಿಸಿರುವುದಿಲ್ಲ. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ನಾನು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುತ್ತೇನೆ. ಕೆಲಸವಿಲ್ಲದ ಕೆಲವು ತಿಳಿಗೇಡಿಗಳು ಹಾಗೂ ಅವರ ಪಟಾಲಂ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ.
ಅದಕ್ಷತೆ, ಸ್ವಜಪಕ್ಷಪಾತ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮನ್ವಯದ ಕೊರತೆ, ‘ಅಡ್ಜಸ್ಟ್ ಮೆಂಟ್’ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ. ಮೀರ್ ಸಾದಿಕ್‍ಗಳು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಬೇರೆಯವರ ಮೇಲೆ ಬೊಟ್ಟು ತೋರಿಸುತ್ತಿರುವ ನಾಯಕರಿಂದಲೇ ಪಕ್ಷ ಇಂದು ಸೋಲಿನ ಮೇಲೆ ಸೋಲು ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ಬೇರೆಯವರ ಮೇಲೆ ಬೊಟ್ಟು ತೋರಿಸುವ ಮುನ್ನ ಬಿಜೆಪಿ ಪಕ್ಷವನ್ನು ಸೋಲಿಸಿದ ನಯವಂಚಕರು ಯಾರು ಮತ್ತು ಅವರ ಬೆನ್ನ ಹಿಂದೆ ಇದ್ದವರು ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.