×
Ad

ಅಶ್ಲೀಲತೆ ಪ್ರಸಾರ, ವಂಚನೆ, ಬೆದರಿಕೆಯೊಡ್ಡುವ ಪ್ರಕರಣಗಳಿಗೆ ಎಫ್‌ಐಆರ್ ಕಡ್ಡಾಯ : ಆದೇಶ

Update: 2026-06-25 23:42 IST

ಬೆಂಗಳೂರು : ಯಾವುದೇ ವ್ಯಕ್ತಿಯ ಖಾಸಗಿ/ಆಪ್ತ ಚಿತ್ರಗಳು ಸೇರಿ ಪ್ರತೀಕಾರಾತ್ಮಕ ಅಶ್ಲೀಲತೆ ಪ್ರಸಾರ, ವಂಚನೆ ಹಾಗೂ ಬೆದರಿಕೆಯೊಡ್ಡುವ ಮುಂತಾದ ಪ್ರಕರಣಗಳ ಕುರಿತು ದೂರು ಬಂದ ತಕ್ಷಣ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಗುರುವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯ ಮೇರೆಗೆ ಆದೇಶ ಹೊರಡಿಸಿರುವ ಅವರು, ಯಾವುದೇ ವ್ಯಕ್ತಿಯ ಖಾಸಗಿ/ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಅವರ ಅನುಮತಿಯಿಲ್ಲದೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗುವ ದೂರುಗಳನ್ನು ದಾಖಲಿಸುವಲ್ಲಿ ಕೆಲವೆಡೆ ನಿರಾಕರಣೆ ಮಾಡುತ್ತಿರುವುದು ಅಥವಾ ವಿಳಂಬವಾಗಿ ದಾಖಲಿಸುತ್ತಿರುವುದು ಗಮನಕ್ಕೆ ಬಂದಿದೆ. ಕೆಲವೊಮ್ಮೆ, ಸಂತ್ರಸ್ತರು ಮೊದಲು ಆ ಚಿತ್ರ/ವೀಡಿಯೊಗಳನ್ನು ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎಂಬ ಕಾರಣದ ಆಧಾರದ ಮೇಲೆ ದೂರು ಸ್ವೀಕರಿಸದಿರುವುದು ಕಂಡುಬಂದಿದೆ ಎಂದಿದ್ದಾರೆ.

ಆದರೆ, ನಿಯಮಾನುಸಾರ, ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಗೂ ಮತ್ತು ಇತರರಿಗೆ ಹಂಚಿಕೆ/ಪ್ರಸಾರಕ್ಕೆ ನೀಡುವ ಒಪ್ಪಿಗೆಗೂ ವ್ಯತ್ಯಾಸವಿದೆ. ಚಿತ್ರೀಕರಣಕ್ಕೆ ಒಪ್ಪಿಗೆ ಇದ್ದರೂ, ಹಂಚಿಕೆಗೆ ಒಪ್ಪಿಗೆ ಇಲ್ಲದಿದ್ದರೂ ಪ್ರಚಾರಪಡಿಸಿರೆ, ಅದು ಅಪರಾಧವಾಗುತ್ತದೆ. ಏಕೆಂದರೆ ದೇಹದ ಗೋಪ್ಯತೆ, ಮಾಹಿತಿಯ ಗೋಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಪ್ರಸಾರವನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21 ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಮಾನ್ಯತೆ ನೀಡಿದೆ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆ ಅಲ್ಲ. ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 77ರ ವಿವರಣೆ 2 ಪ್ರಕಾರ, ಪೀಡಿತರು ಚಿತ್ರ/ವೀಡಿಯೊ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ, ಮೂರನೇ ವ್ಯಕ್ತಿಗಳಿಗೆ ಹಂಚಲು ಒಪ್ಪಿಗೆ ನೀಡದಿದ್ದಲ್ಲಿ ಮತ್ತು ಚಿತ್ರ/ವೀಡಿಯೊ ಹಂಚಿಕೆಯಾಗಿದ್ದರೆ, ಅದು ಅಪರಾಧವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಒಬ್ಬ ಮಹಿಳೆ ಖಾಸಗಿ ಕ್ರಿಯೆಯಲ್ಲಿ ತೊಡಗಿರುವಾಗ, ಸಾಮಾನ್ಯವಾಗಿ ನೋಡಬಾರದೆಂಬ ನಿರೀಕ್ಷೆಯ ಪರಿಸ್ಥಿತಿಯಲ್ಲಿ, ಆಕೆಯನ್ನು ನೋಡುವುದು, ಚಿತ್ರ ಸೆರೆಹಿಡಿಯುವುದು ಅಥವಾ ಅಂತಹ ಚಿತ್ರಗಳನ್ನು ಪ್ರಸಾರ ಮಾಡುವುದು ಅಪರಾಧವಾಗುತ್ತದೆ. ಈ ಅಪರಾಧಗಳಿಗೆ 1 ರಿಂದ 7 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳ ಚಿತ್ರವನ್ನು ಅವರ ಅನುಮತಿಯಿಲ್ಲದೆ ಸೆರೆಹಿಡಿಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಗೋಪ್ಯತೆಯನ್ನು ಉಲ್ಲಂಘಿಸುವ ಸಂದರ್ಭಗಳಲ್ಲಿ ನಡೆದರೆ, ಅದು ಅಪರಾಧವಾಗುತ್ತದೆ. ಇದಕ್ಕೆ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಕಾಮಪ್ರಚೋದಕ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದ್ದು, ಗರಿಷ್ಠ 3 ವರ್ಷಗಳ ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಪುನರಾವರ್ತಿತ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ಹಾಕಲಾಗುತ್ತದೆ.

ಲೈಂಗಿಕ ಕ್ರಿಯೆ ಅಥವಾ ಲೈಂಗಿಕವಾಗಿ ಸ್ಪಷ್ಟ ವಿಷಯ ಹೊಂದಿರುವ ವಸ್ತುಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದ್ದು, ಗರಿಷ್ಠ 5 ರಿಂದ 7ವರ್ಷಗಳ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಡಾ. ಎಂ.ಎ. ಸಲೀಂ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ಪ್ರಕಾರ ‘ಝೀರೋ ಎಫ್‌ಐಆರ್’ ದಾಖಲಿಸಿ, ತಕ್ಷಣ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಐಟಿ ಕಾಯ್ದೆ ಮತ್ತು ಐಟಿ ನಿಯಮಗಳು, 2021ರ ಅನ್ವಯ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಿ, ಅಪರಾಧಕರ ವಿಷಯವನ್ನು ತೆಗೆದುಹಾಕಲು/ತಡೆಹಿಡಿಯುವ ತ್ವರಿತ ಕ್ರಮ ಕೈಗೊಳ್ಳಬೇಕು. ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಎಫ್‌ಐಆರ್ ನೋಂದಣಿಯನ್ನು ನಿರಾಕರಿಸಕೂಡದು ಅಥವಾ ಮುಂದೂಡಬಾರದು. ಆ ಒಪ್ಪಿಗೆಯು, ನಂತರದ ಅನುಮತಿಯಿಲ್ಲದ ಪ್ರಸಾರಕ್ಕೆ ರಕ್ಷಣೆಯಾಗುವುದಿಲ್ಲ. ಆಪ್ತ ವಿಷಯಗಳನ್ನು ಬಳಸಿ ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ/ಸುಲಿಗೆ ನಡೆಸಿದರೆ, ಬಿಎನ್‌ಸ್, 2023ರ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ವಿಧಿಗಳನ್ನು ಐಟಿ ಕಾಯ್ದೆಯ ಜೊತೆಗೆ ಅಳವಡಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ನೋಂದಣಿ ಮಾಡದಿರುವುದು, ಅಥವಾ ಪೂರ್ವಾನುಮತಿ ಎಂಬ ತಪ್ಪುಕಾರಣದಿಂದ ವಿಳಂಬ ಮಾಡುವುದು ಕಂಡುಬಂದ ಪಕ್ಷದಲ್ಲಿ ಅಂತಹ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

ಡಾ. ಎಂ.ಎ. ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ

ಪೀಡಿತರ ಗುರುತು ಗೋಪ್ಯವಾಗಿರುವಂತೆ ನೋಡಿಕೊಳ್ಳಬೇಕು. ದೂರುದಾರರನ್ನು ಸೂಕ್ಷ್ಮವಾಗಿ ನಡೆಸಿಕೊಳ್ಳುವುದು. ಸಾಧ್ಯವಾದಲ್ಲಿ, ಮಹಿಳಾ ಸಂತ್ರಸ್ತೆಯ ದೂರನ್ನು ಮಹಿಳಾ ಅಧಿಕಾರಿಯಿಂದಲೇ ದಾಖಲಿಸಬೇಕು. ತನಿಖಾಧಿಕಾರಿಗಳು ತಾಂತ್ರಿಕ ತನಿಖೆ, ಖಾತೆ ಪತ್ತೆ ಹಾಗೂ ಸಾಧನಗಳ ಫಾರೆನ್ಸಿಕ್ ವಿಶ್ಲೇಷಣೆಗೆ ಸಂಬಂಧಿತ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯತೆ ಸಾಧಿಸಬೇಕು.

ಪ್ರಿಯಾಂಕ್ ಖರ್ಗೆ, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News