ತುಮಕೂರು ಜಿಲ್ಲೆಯಲ್ಲಿ ಮಲಹೊರುವ ಅನಿಷ್ಟ ಪದ್ದತಿ ಇನ್ನೂ ಜೀವಂತ; ವಿಡಿಯೋ ವೈರಲ್
ತುಮಕೂರು : ದೇಶದಲ್ಲಿ ಬರಿಗೈಯಲ್ಲಿ ಮಲ ಬಾಚುವ ಮತ್ತು ಹೊರುವ ಪದ್ದತಿಯನ್ನು ನಿಷೇಧಿಸಿದ್ದರೂ, ಕೆ.ಇ.ಬಿ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಮಲವನ್ನು ಬರಿಗೈಯಲ್ಲಿ ಬಾಚಿಸಿರುವ ಘಟನೆ ವರದಿಯಾಗಿದೆ.
ನಗರದ ಕೋತಿ ತೋಪು ಸಮೀಪದಲ್ಲಿಯೇ ಇರುವ ಕೆ.ಇ.ಬಿ. ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಮಲದ ಗುಂಡಿಯನ್ನು ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಕಾರ್ಮಿಕರು ಬರಿಗೈಯಲ್ಲಿಯೇ ಸ್ವಚ್ಚಗೊಳಿಸಿ, ಬರಿ ಮೈ ನಲ್ಲಿಯೇ ಹೊತ್ತು ಹಾಕುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಇಂಜಿನಿಯರ್ ರೊಬ್ಬರು ನಮಗೆ ಈ ಕೆಲಸ ಮಾಡುವಂತೆ ನಿಯೋಜಿಸಿದ್ದಾರೆ ಎಂದು ಸ್ವಚ್ಚತೆ ಇಳಿದಿದ್ದ ಕೆಲಸಗಾರರು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಹೊರಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕೆ.ಇ.ಬಿ. ಇಂಜಿನಿಯರ್ಸ್ ಅಸೋಸಿಯೇಷನ್‍ನ ನವೀಕರಣ ನಡೆಯುತ್ತಿದ್ದು, ಕಳೆದ ಮೂರು ದಿನಗಳಿಂದ ಮಲದ ಗುಂಡಿ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ಕಾರ್ಮಿಕರು ತಿಳಿಸಿದ್ದಾರೆ. ನಮಗೆ ಮಣ್ಣು ತೆಗೆಯುವ ಕೆಲಸ ಎಂದು ಕರೆ ತಂದರೂ, ಸ್ಥಳಕ್ಕೆ ಬಂದು ನೋಡಿದಾಗ ಮಲದ ಗುಂಡಿ ಸ್ವಚ್ಚಗೊಳಿಸುವ ಕೆಲಸವಾಗಿತ್ತು. ಹೊಟ್ಟೆಪಾಡಿಗಾಗಿ ಒಪ್ಪಿಕೊಂಡ ಕೆಲಸ ಮಾಡುತ್ತಿದ್ದೇವೆ. ನಮಗೆ ಈ ಕೆಲಸ ಮಾಡಬಾರದು ಎಂಬುದು ತಿಳಿದಿಲ್ಲ ಎಂದು ತಮ್ಮ ಆಸಹಾಯಕತೆಯನ್ನು ಕಾರ್ಮಿಕರು ತೋಡಿಕೊಂಡಿದ್ದು, ಇನ್ನು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಕೂಡಲೇ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.