ಅತಿ ವೇಗದಲ್ಲಿಯೇ 72 ಸಾವಿರ ಸರಕಾರಿ ಹುದ್ದೆ ಭರ್ತಿ : ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಪೈಕಿ 72 ಸಾವಿರ ಹುದ್ದೆಗಳನ್ನು ಅತಿ ವೇಗದಲ್ಲಿಯೇ ಭರ್ತೀ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ನಿರುದ್ಯೋಗಿಗಳಿದ್ದಾರೆ, ಅವರೆಲ್ಲರೂ ಅನೇಕ ಸಂದರ್ಭದಲ್ಲಿ ನೇಮಕಾತಿ ಮಾಡುವಂತೆ ಬೀದಿಗಿಳಿದಿದು ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ನಾವು ವೇಗವಾಗಿ 72,000 ಹುದ್ದೆಯನ್ನು ತುಂಬುತ್ತಿದ್ದೇವೆ ಎಂದರು.
ನಾವು ಪ್ರಣಾಳಿಕೆಯಲ್ಲಿ ಹಂತ ಹಂತವಾಗಿ ನಾವು ಖಾಲಿ ಹುದ್ದೆಗಳನ್ನು ತುಂಬುತ್ತೇವೆ ಎಂದು ಹೇಳಿದ್ದೆವು. ಆದರೆ, ಅನೇಕ ಕಾರಣಗಳಿಂದ ಅದು ವಿಳಂಬವಾಯಿತು. ಒಳಮೀಸಲಾತಿ ವಿಚಾರ ಬಗೆಹರಿಯದೆ ಇದ್ದದ್ದು ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರ ಸಮಿತಿಯ ವರದಿ ಆಧಾರದ ಮೇಲೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಬಳಿಕ ಬಜೆಟ್‍ನಲ್ಲಿಯೇ 56,942 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದ್ದೆವು ಎಂದರು.
ಇದಾದ ನಂತರ ಅದರ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದವು. 24,000 ಹುದ್ದೆಗಳಿಗೆ ಆರ್ಥಿಕ ಇಲಾಖೆ ಕೂಡ ಅನುಮತಿಯನ್ನು ನೀಡಿದೆ. ಎಲ್ಲ ಇಲಾಖೆಗಳಿಗೆ ಅಧಿಸೂಚನೆ ಹೊರಡಿಸುವಂತೆ ನಾವು ತಿಳಿಸಿದ್ದೆವು. ಈ ಮಧ್ಯೆ ಸರಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾದ ನಂತರ ಅದನ್ನು ಪುನರ್ ಪರಿಶೀಲನೆ ಮಾಡಿ ಈಗ 72,000 ಹುದ್ದೆಗಳನ್ನು ತುಂಬಬೇಕು ಎಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಧಿಸೂಚನೆ ಮಾಡಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.