ವಿವಾದಿತ ‘ಬಸವ ಮಂಟಪ’ ಕೃತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರಕಾರ ಆದೇಶ
ರವಿ ಹಂಜ್
ಬೆಂಗಳೂರು : ಬಸವಣ್ಣನ ವಿಚಾರ, ತತ್ವಗಳಿಗೆ ಅಪಚಾರ ಮಾಡಿದ ಹಾಗೂ ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡಿದ ಆರೋಪದ ಮೇಲೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿಶ್ವವಾಣಿ ಪುಸ್ತಕ ಹೊರತಂದಿರುವ ಹಾಗೂ ರವಿ ಹಂಜ್ ಬರೆದಿರುವ `ಬಸವ ಮಂಟಪ’ ವಿವಾದಿತ ಕೃತಿಯನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆದೇಶ ಹೊರಡಿಸಿದೆ.
ಲಿಂಗಾಯತ ಸಮುದಾಯ ಮುಖಂಡರು, ಸಚಿವರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು `ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಹಾಗೆಯೇ ಲೇಖಕ ಹಾಗೂ ಪ್ರಕಾಶಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದರು. ಒತ್ತಾಯಕ್ಕೆ ಮಣಿದ ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದು, ಈಗ ಕೃತಿಯ ಮುಟ್ಟುಗೋಲಿಗೆ ಆದೇಶ ಹೊರಡಿಸಿದೆ.
ಕೃತಿಯಲ್ಲಿರುವ ಅಂಶಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದು, ಕಾನೂನುಬಾಹಿರವಾಗಿವೆ. ಹೀಗಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಕಲಂ 98(1)ರ ಅನ್ವಯ ಕ್ರಮ ವಹಿಸಲಾಗಿದ್ದು, `ಬಸವ ಮಂಟಪ’ ಕೃತಿಯ ಮುದ್ರಣ, ವಿತರಣೆ ಮತ್ತು ಡಿಜಿಟಲ್ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ದೇಶದ ಯಾವುದೇ ಸ್ಥಳ ಹಾಗೂ ಪ್ರದೇಶದಲ್ಲಿ `ಬಸವ ಮಂಟಪ’ ಕೃತಿಯ ಮುದ್ರಿತ ಹಾಗೂ ಡಿಜಿಟಲೀಕೃತ ಪ್ರತಿಗಳು ಕಂಡುಬಂದರೆ ರಾಜ್ಯ ಪೊಲೀಸ್ ಇಲಾಖೆಯು ಜಪ್ತಿ ಮಾಡಿ, ಮುಟ್ಟುಗೋಲು ಹಾಕಿಕೊಳ್ಳಲಿದೆ. ಹೀಗಾಗಿ ಕೃತಿಯ ಪ್ರಕಟಣೆ ಹಾಗೂ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಈಗಾಗಲೇ ಬೆಂಗಳೂರಿನ ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ರಾಜ್ಯ ಸರಕಾರದ ಆದೇಶದ ಪ್ರತಿ ರವಾನೆಯಾಗಿದ್ದು, ಸಬ್ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್ ಅಧಿಕಾರಿಗಳಿಗೆ `ಬಸವ ಮಂಟಪ’ ಕೃತಿಯ ಪ್ರತಿಗಳಿಗಾಗಿ ಶೋಧ ನಡೆಸುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.