×
Ad

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನಗತ್ಯವಾಗಿ ಅಡ್ಡಿಪಡಿಸಿ ರಾಜಕೀಯ : ಕೆ.ಜೆ.ಜಾರ್ಜ್

Update: 2026-03-09 20:40 IST

ಬೆಂಗಳೂರು : ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಯೋಜನೆ ವಿಚಾರದಲ್ಲಿ ಅನಗತ್ಯವಾಗಿ ಅಡ್ಡಿಪಡಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸುವವರೊಂದಿಗೆ ಚರ್ಚೆ ನಡೆಸಲು ಸಿದ್ಧವಾಗಿದ್ದೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ರಾತ್ರಿ ಹಾಗೂ ಪೀಕ್ ಅವರ್‍ನಲ್ಲಿ ವಿದ್ಯುತ್ ಕೊರತೆಯಿದ್ದು, ಸೋಲಾರ್ ಹಾಗೂ ಪವನ ವಿದ್ಯುತ್ ಶಕ್ತಿ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರಕಾರದಿಂದಲೂ ವಿದ್ಯುತ್ ಪೂರೈಕೆಯಾಗುತ್ತಿದೆ. ಆದಾಗ್ಯೂ ವಿದ್ಯುತ್ ಸ್ಟೋರೇಜ್ ಮಾಡಲು ಶರಾವತಿ ಕಣಿವೆಯಿಂದ ಜಲ ವಿದ್ಯುತ್ ಉತ್ಪಾದಕ ಘಟಕ ಸ್ಥಾಪಿಸುವ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಕೇಂದ್ರ ವನ್ಯಜೀವಿ ಮಂಡಳಿ ಮುಂದೆ ನಮ್ಮ ಯೋಜನೆ ಬಾಕಿಯಿರುವಾಗಲೇ ಉದ್ದೇಶಿತ ಕಾಮಗಾರಿಗಳಿಗೆ ಅಡ್ಡಿ ಮಾಡುವುದು ಸರಿಯಿಲ್ಲ ಎಂದು ಆಕ್ಷೇಪಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ವಾರಾಹಿ ವಿದ್ಯುತ್ ಯೋಜನೆಯಿಂದ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಅರಣ್ಯ ಪ್ರದೇಶದ ನೆಲದಡಿಯಲ್ಲಿ ಪೈಪುಗಳನ್ನು ಹಾಕಲಾಗುವುದು. ಸುಮಾರು 110 ಎಕರೆ ಅರಣ್ಯ ಪ್ರದೇಶದಲ್ಲಿ ಪೈಪ್ ಹಾದು ಹೋಗಲಿದೆ. ನಾಲ್ಕು ವರ್ಷಗಳಲ್ಲಿ ಯೋಜನೆ ಕಾಮಗಾರಿ ಮುಗಿದ ಬಳಿಕ ಅರಣ್ಯ ಪ್ರದೇಶ ಎಂದಿನಂತೆ ಇರಲಿದ್ದು, ವನ್ಯಜೀವಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News