×
Ad

ದಿಲ್ಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ: ಡಿ.ಕೆ.ಶಿವಕುಮಾರ್

Update: 2026-03-09 21:05 IST

ಡಿ.ಕೆ.ಶಿವಕುಮಾರ್

ದಿಲ್ಲಿ : ಹೊಸದಿಲ್ಲಿಯಲ್ಲಿ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದಿಲ್ಲಿಗೆ ಬಂದ ಮೇಲೆ ನಾನು ಎಲ್ಲರನ್ನು ಭೇಟಿ ಮಾಡುತ್ತೇನೆ. ನೀವುಗಳು(ಮಾಧ್ಯಮಗಳು), ಡಿ.ಕೆ ದಿಲ್ಲಿಗೆ ಹೋದರೂ ನಾಯಕರು ಸಮಯ ನೀಡಿಲ್ಲ, ಕಾಯುತ್ತಾ ಕೂತಿದ್ದಾರೆ ಎಂದು ವರದಿ ಮಾಡುತ್ತೀರಲ್ಲಾ, ಹಾಗೇ ಕಾಯುತ್ತಾ ಕೂತಿರುವೆ ಎಂದರು.

ಪುಣೆಯಲ್ಲಿರುವ ನನ್ನ ಸ್ನೇಹಿತರ ಮನೆ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ ನಿನ್ನೆ ದಿಲ್ಲಿಗೆ ಬಂದಿದ್ದೆ. ಇಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೆ. ಇಂದು ಅನೇಕ ಸಭೆಗಳಿವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವಿದೆ ಎಂದು ಶಿವಕುಮಾರ್ ಹೇಳಿದರು.

ನಾಳೆಗೆ ನೀವು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ಹೌದು, ನಾಳೆಗೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ. ಮತ್ತೊಂದು ದಿನ ನಮ್ಮ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ಖಾಸಗಿ ಕಾರ್ಯಕ್ರಮ ಎಂದರೂ ಡಿ.ಕೆ.ಶಿವಕುಮಾರ್ ದಿಲ್ಲಿ ಭೇಟಿ ಎಂದರೆ ವಿಭಿನ್ನ ಚರ್ಚೆಗಳೆ ಸಾಗುತ್ತವೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾವ ವಿಭಿನ್ನ ಚರ್ಚೆನೂ ಬೇಡ. ನಾಳೆ (ಮಂಗಳವಾರ) ಭೋಜನಕೂಟವಿದೆ, ನಾಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ ಎಂದು ತಿಳಿಸಿದರು.

ಅಸ್ಸಾಂ ಚುನಾವಣೆಗೆ 43 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 43 ಅಭ್ಯರ್ಥಿಗಳ ಪಟ್ಟಿ ಈಗಾಗಲೆ ಬಿಡುಗಡೆಯಾಗಿದ್ದು, ಇಂದು ಮತ್ತೊಂದು ಸ್ಕ್ರೀನಿಂಗ್ ಸಮಿತಿ ಸಭೆ ಇದೆ. ಈ ಸಮಿತಿಯಲ್ಲಿ ನಾನು ಇಲ್ಲ ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News