×
Ad

ಭ್ರೂಣ ಹತ್ಯೆ ತಡೆಗೆ ಎಲ್ಲ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿ ನೇಮಕ : ದಿನೇಶ್ ಗುಂಡೂರಾವ್

‘10ನೇ ವಾರದಲ್ಲೇ ಗರ್ಭಿಣಿಯರ ಕಡ್ಡಾಯ ನೋಂದಣಿ’

Update: 2026-03-09 21:01 IST

ದಿನೇಶ್‌ ಗುಂಡೂರಾವ್‌/ ಸಾಂದರ್ಭಿಕ ಚಿತ್ರ (PC : freepik)

ಬೆಂಗಳೂರು : ಭ್ರೂಣ ಹತ್ಯೆ ತಡೆಯಲು ಎಲ್ಲ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜತೆಗೆ ಗರ್ಭಿಣಿಯರನ್ನು 10ನೇ ವಾರದಲ್ಲಿಯೇ ಕಡ್ಡಾಯ ನೋಂದಣಿ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲಿಂಗ ಪತ್ತೆ ಮಾಡುವ ಪ್ರಕ್ರಿಯೆ ಗರ್ಭ ಧರಿಸಿ 12ವಾರ ಕಳೆದ ನಂತರ ಮಾತ್ರ ಮಾಡಲಾಗುತ್ತದೆ. ಈವರೆಗೂ 12ವಾರ ಆದ ನಂತರ ಎಎಂಸಿ ನೋಂದಣಿ ಮಾಡಲಾಗುತ್ತಿತ್ತು. ಈಗ ಬದಲಾವಣೆ ಮಾಡಿ 10ನೇ ವಾರಕ್ಕೆ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಭ್ರೂಣ ಹತ್ಯೆ ತಡೆಯಲು ಸಹಾಯಕವಾಗಿದೆ ಎಂದರು.

ಹೆಣ್ಣು ಭ್ರೂಣ ಹತ್ಯೆ ಎನ್ನುವುದು ಸಾಮಾಜಿಕ ಪಿಡುಗು. ಕಾನೂನು ಮಾಡುವುದರಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಗಂಡುಮಕ್ಕಳಿಲ್ಲದಿದ್ದರೆ ನಮ್ಮ ಕುಲವೇ ಮುಗಿದು ಹೋಗುತ್ತದೆ. ಗಂಡು ಮಕ್ಕಳಿದ್ದರೆ ಮಾತ್ರ ನಮ್ಮ ವಂಶ ಬೆಳಗುತ್ತದೆ ಎನ್ನುವ ಭಾವನೆಗಳು ಕೆಲ ಪ್ರದೇಶದಲ್ಲಿ ಇದೆ ಎಂದು ಅವರು ಹೇಳಿದರು.

ಈಗಾಗಲೇ ಪಿಸಿ-ಎನ್‍ಡಿಟಿ ಸೇರಿದಂತೆ ಹಲವಾರು ಕಾನೂನುಗಳಿದೆ. ‘ಬಾಲಿಕಾ’ ಎಂಬ ಆನ್‍ಲೈನ್ ಸಾಫ್ಟ್‌ ವೇರ್ ಅಡಿಯಲ್ಲಿ ಎಲ್ಲ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ 80 ಪ್ರಕರಣಗಳಲ್ಲಿ ದಂಡ ವಿಧಿಸಿ, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈಗಾಗಲೇ 3 ವೈದ್ಯರು, 5 ನರ್ಸ್‍ಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಗುಪ್ತ ಕಾರ್ಯಾಚರಣೆಯನ್ನು ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಭಾಗ್ಯಲಕ್ಷ್ಮೀ ಬಾಂಡ್, ಗೃಹಲಕ್ಷ್ಮೀ ಯಂತಹ ಯೋಜನೆಗಳ ಮೂಲಕ ಹೆಣ್ಣುಮಕ್ಕಳ ಕುರಿತು ಸಕಾರಾತ್ಮಕ ಭಾವನೆ ಮೂಡುವಂತೆ ಎಲ್ಲ ಸರಕಾರಗಳು ಪ್ರಯತ್ನ ಮಾಡಿದೆ. ಮಹಿಳೆಯರಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಹಿಳೆಯರು ಸಾಮಾಜಿಕವಾಗಿ ಸಮಾನರು ಎನ್ನುವುದನ್ನು ಮನವರಿಕೆ ಮಾಡುತ್ತಿದ್ದೇವೆ. ಹೆಚ್ಚೆಚ್ಚು ಪರಿಣಾಮಕಾರಿ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

2024-25ರ ಸಾಲಿನಲ್ಲಿ ಹೆಣ್ಣುಭ್ರೂಣ ಹತ್ಯೆ ಮತ್ತು ಹತ್ಯೆ ಮಾಡುವಂತಹ ಸ್ಥಳಗಳ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಾಯದಿಂದ ಏಳು ಕಡೆ ದಾಳಿ ನಡೆಸಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇಂತಹ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಮೂವರು ಬಹುಮಾನ ಪಡೆದಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್‍ಗಳು ಹೆಚ್ಚು ಇರುವುದರಿಂದ ಬೆಂಗಳೂರಿನಲ್ಲಿ ಐದು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡುತ್ತಾರೆ. ಈಗ ಮೊಬೈಲ್ ಅಲ್ಟ್ರಾಸೌಂಡ್ ಮಷಿನ್ ಬಂದು ಮತ್ತೊಂದಿಷ್ಟು ಸವಾಲು ಎದುರಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News