ʼಆಪರೇಷನ್ ಮುಕ್ತ’ ಆರಂಭ : ಬಂಗಾಳಿ ಭಾಷಿಕ ವಲಸಿಗರನ್ನು ಥಳಿಸಿ ವಶಕ್ಕೆ ಪಡೆದ ಬೆಂಗಳೂರು ಪೊಲೀಸರು
Photo Credit : thewire.in
ಬೆಂಗಳೂರು,ಆ.15: ಆಗಸ್ಟ್ 8ರಂದು ನಸುಕಿನ ಐದು ಗಂಟೆಯ ಸುಮಾರಿಗೆ ಪೂರ್ವ ಬೆಂಗಳೂರಿನ ಬೆಳಗೆರೆಯಲ್ಲಿ ಶೋಭಾ ಡ್ರೀಮ್ ಏಕರ್ಸ್ ಸಮೀಪದ ಪ್ರದೇಶದಲ್ಲಿ ಪೋಲಿಸರು ‘ಆಪರೇಷನ್ ಮುಕ್ತ’ ಹೆಸರಿನಲ್ಲಿ ದಾಳಿಯನ್ನು ನಡೆಸಿದರು. ಕೆಲವೇ ಪೋಲಿಸರು ಸಮವಸ್ತ್ರದಲ್ಲಿದ್ದರೆ ಉಳಿದವರು ಮಫ್ತಿಯಲ್ಲಿದ್ದರು. ಬಂಗಾಳಿ ಭಾಷಿಕ ಮುಸ್ಲಿಂ ಮತ್ತು ದಲಿತ ಸಮುದಾಯದ ವಲಸೆ ಕಾರ್ಮಿಕರು ವಾಸಿಸುತ್ತಿದ್ದ ತಾತ್ಕಾಲಿಕ ರೆಪಡಿಗಳ ಬಾಗಿಲುಗಳನ್ನು ತಟ್ಟಿದ ಪೊಲೀಸರು ಯಾವುದೇ ಸರಿಯಾದ ಕಾರಣ ನೀಡದೆ 100ಕ್ಕೂ ಹೆಚ್ಚು ಜನರನ್ನು ಅವರು ಹೊಂದಿದ್ದ ದಾಖಲೆಗಳ ಸಹಿತ ಬಲವಂತವಾಗಿ ಪಿಕಪ್ ವಾಹನಗಳಿಗೆ ತುಂಬಿ ಕರೆದೊಯ್ದರು. ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿ ವಾಹನಗಳಿಗೆ ತಳ್ಳಲಾಯಿತು.
ಎರಡು ದಿನಗಳಲ್ಲಿ ನಗರದಾದ್ಯಂತ, ವಿಶೇಷವಾಗಿ ಹೊರವಲಯದ ಪ್ರದೇಶಗಳಲ್ಲಿ ನಡೆಸಲಾದ ವ್ಯಾಪಕ ದಾಳಿಗಳಲ್ಲಿ ಸುಮಾರು 3,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇಷ್ಟೊಂದು ಜನರನ್ನು ಇರಿಸಲು ಪೊಲೀಸ್ ಠಾಣೆಗಳಲ್ಲಿ ಜಾಗದ ಅಭಾವವಿದ್ದ ಕಾರಣ ಖಾಸಗಿ ಕಲ್ಯಾಣ ಮಂಟಪಗಳು ಮತ್ತು ಸಮುದಾಯ ಭವನಗಳಲ್ಲಿ ಇರಿಸಲಾಗಿತ್ತು.
ಕರ್ನಾಟಕ ಸರಕಾರವು ಹೊಸದಾಗಿ ಪ್ರಾರಂಭಿಸಿರುವ ‘ಆಪರೇಷನ್ ಮುಕ್ತ’ ಅಡಿಯಲ್ಲಿ ಬೆಂಗಳೂರಿನ ಕೊಳಚೆ ಹಾಗೂ ತಾತ್ಕಾಲಿಕ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.
ಪೊಲೀಸರು ದಾಳಿಗೂ ಮುನ್ನ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದರು ಮತ್ತು ಪಕ್ಕದ ಕಟ್ಟಡಗಳ ಕ್ಯಾಮೆರಾಗಳನ್ನು ಬಂದ್ ಮಾಡಿಸಿದ್ದರು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಲವರು ಆರೋಪಿಸಿದರು.
ವಿವಿಧ ಮಾಧ್ಯಮಗಳು ಬೇರೆ ಬೇರೆ ಸಂಖ್ಯೆಗಳನ್ನು ವರದಿ ಮಾಡಿವೆ. ಆದರೆ ವಶಕ್ಕೆ ಪಡೆಯಲಾದ ಜನರ ನಿಖರ ಸಂಖ್ಯೆ ಎಷ್ಟು ಅಥವಾ ಅವರಲ್ಲಿ ಎಷ್ಟು ಮಂದಿ ನಿಜವಾಗಿಯೂ ಅಧಿಕೃತ ದಾಖಲೆಗಳಿಲ್ಲದವರು ಎಂಬ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರವು ಕಟ್ಟುನಿಟ್ಟಾದ ಹಾಗೂ ಗಂಭೀರವಾದ ಪರಿಶೀಲನೆ ನಡೆಸುತ್ತಿದೆ ಮತ್ತು ಅಕ್ರಮ ವಲಸೆಗೆ ಕಡಿವಾಣ ಹಾಕುವಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ಒತ್ತಿ ಹೇಳಿದ್ದಾರೆ.
ವಶಕ್ಕೆ ಪಡೆದವರ ಫೋನ್‌ಗಳನ್ನು ಕಸಿದುಕೊಂಡ ಪೊಲೀಸರು ಅಂತರರಾಷ್ಟ್ರೀಯ ಕರೆಗಳಿಗೆ ಬಳಸಲಾಗುವ ‘ಇಮೋ’ (ಐಎಂಒ) ಆ್ಯಪ್ ಹೊಂದಿದ್ದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು ಎಂದು ವಶಕ್ಕೆ ತೆಗೆದುಕೊಂಡವರಲ್ಲಿ ಒಬ್ಬರಾದ 30ರ ಹರೆಯದ ಸಾಹೇಬಾ (ಹೆಸರು ಬದಲಿಸಲಾಗಿದೆ) ತಿಳಿಸಿದರು.
ಸಂತ್ರಸ್ತರು ತಮ್ಮ ವಸತಿ ಪುರಾವೆ, ಆಧಾರ್, ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ತೋರಿಸಿದರೂ ಪೊಲೀಸರು ತಕ್ಷಣ ಬಿಡುಗಡೆ ಮಾಡಲಿಲ್ಲ. ಹೈಕೋರ್ಟ್‌ನಿಂದ ಪೌರತ್ವ ಸ್ಥಾಪಿತವಾಗಿ ಬಿಡುಗಡೆ ಭಾಗ್ಯ ಪಡೆದಿದ್ದ ವ್ಯಕ್ತಿಯನ್ನೂ ಮತ್ತೆ ವಶಕ್ಕೆ ಪಡೆಯಲಾಗಿತ್ತು. ಕೆಲವೆಡೆ ರಾಷ್ಟ್ರೀಯತೆ ಸಾಬೀತುಪಡಿಸಲು ರಾಷ್ಟ್ರಗೀತೆ ಹಾಡುವಂತೆ ಪೀಡಿಸಲಾಯಿತು.
ಆಗಸ್ಟ್ 8 ಮತ್ತು 9ರ ನಡುವೆ ಪೊಲೀಸರು ದಾಳಿ ನಡೆಸಿದ ಸುಮಾರು 90 ಸ್ಥಳಗಳಲ್ಲಿ ಇದೇ ರೀತಿಯ ವಿಚಾರಣೆ ಮುಂದುವರಿದಿತ್ತು. ವೈಟ್‌ಫೀಲ್ಡ್, ವರ್ತೂರು, ಕಾಡುಗೋಡಿ, ಬೆಳಗೆರೆ ರೋಡ್, ಬೆಳ್ಳಂದೂರು, ಮಾರತಹಳ್ಳಿ, ಮಹದೇವಪುರ ಮತ್ತು ಹೆಬ್ಬಗೋಡಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ಸಿಟಿಯ ಕೆಲವು ಭಾಗಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಪೊಲೀಸರು ವಶಕ್ಕೆ ಪಡೆದ ಸಾವಿರಾರು ಜನರಲ್ಲಿ ಕೇವಲ 105 ಮಂದಿ ಮಾತ್ರ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಡಿಸಿಪಿ (ಎಲೆಕ್ಟ್ರಾನಿಕ್ಸ್ ಸಿಟಿ) ಎಂ.ನಾರಾಯಣ ಹೇಳಿದ್ದಾರೆ.
ಪಿಯುಸಿಎಲ್‌ನಂತಹ ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ವಕೀಲರು ಪೊಲೀಸರ ಈ ಕ್ರಮವನ್ನು ಕಾನೂನುಬಾಹಿರ ಮತ್ತು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಎಂದು ಕರೆದಿದ್ದಾರೆ. ದಿನಗೂಲಿ ಕಾರ್ಮಿಕರು, ಡೆಲಿವರಿ ಬಾಯ್ಸ್ ಮತ್ತು ಗೃಹ ಕಾರ್ಮಿಕರಾಗಿ ದುಡಿಯುವ ಬಡ ವಲಸಿಗರಲ್ಲಿ ಈ ಕಾರ್ಯಾಚರಣೆಯು ಭಯ, ಆತಂಕ ಮತ್ತು ಪರಸ್ಪರ ಸಂಶಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವಿವೇಚನಾರಹಿತ ದಾಳಿಗಳು ಜನರ ಮನಸ್ಸಿನಲ್ಲಿ ಸಂಶಯದ ವಾತಾವರಣವನ್ನು ಸೃಷ್ಟಿಸಿವೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಆರ್. ಕಲೀಮುಲ್ಲಾ ಹೇಳಿದರು.
ಇಮೋ ಉಚಿತ, ಅಂತರರಾಷ್ಟ್ರೀಯ ವೀಡಿಯೊ ಕರೆ ಮತ್ತು ಸಂದೇಶ ರವಾನೆಯ ಆ್ಯಪ್ ಆಗಿದ್ದು, ವಿದೇಶದಲ್ಲಿರುವ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂವಹನ ನಡೆಸಲು ಜನರು ಸಾಮಾನ್ಯವಾಗಿ ಬಳಸುತ್ತಾರೆ. ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಯ ಕಳವಳಗಳನ್ನು ಉಲ್ಲೇಖಿಸಿ ಕೇಂದ್ರ ಸರಕಾರವು 2023ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69ಎ ಅಡಿಯಲ್ಲಿ ಇದರ ಬಳಕೆಯನ್ನು ನಿರ್ಬಂಧಿಸಿದ್ದರೂ, ಇದು ಬಂಗ್ಲಾದೇಶಕ್ಕೆ ಮಾತ್ರವಲ್ಲದೆ ಯುಎಇ ಮತ್ತು ವಿಶ್ವದ ಇತರ ಭಾಗಗಳಿಗೂ ಕರೆ ಮಾಡಲು ವ್ಯಾಪಕವಾಗಿ ಬಳಕೆಯಲ್ಲಿದೆ.