ಹನೂರು ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ : ಸಿಎಂ ಡಿ.ಕೆ.ಶಿವಕುಮಾರ್

Update: 2026-08-15 17:55 IST

ಬೆಂಗಳೂರು : ಚಾಮರಾಜನಗರ ಅರಣ್ಯದಲ್ಲಿ ಎನ್​​ಕೌಂಟರ್ ವಿಚಾರ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಬಳಿಕ ವಾಸ್ತವಾಂಶ ತಿಳಿಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಸಂಬಂಧ ಶನಿವಾರ ನಗರದಲ್ಲಿ ಮಾತನಾಡಿದ ಅವರು, ನನಗೆ ಬೆಳಿಗ್ಗೆ ಐದು ಗಂಟೆಗೆ ಮಾಹಿತಿ ತಲುಪಿದೆ. ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದೇವೆ.‌ ತನಿಖೆಯ ವೇಳೆ ವಾಸ್ತವಾಂಶ ತಿಳಿಯುತ್ತದೆ ಎಂದು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೆಲವು ವಸ್ತು ಹಾಗೂ ಬಂದೂಕುಗಳನ್ನ ಜಪ್ತಿ ಮಾಡಲಾಗಿದೆ. ಪರಿಶೀಲನೆ‌ ಸಹ ನಡೆಯುತ್ತಿದೆ. ಮ್ಯಾಜಿಸ್ಟ್ರೇಟ್ ತನಿಖೆ ಬಳಿಕ ಎಲ್ಲ ಮಾಹಿತಿ ತಿಳಿಯಲಿದೆ ಎಂದು ನುಡಿದರು.

ಏನಿದು ಪ್ರಕರಣ :

ಅರಣ್ಯದಲ್ಲಿ ಬೇಟೆಗೆ ಬಂದಿದ್ದರೆನ್ನಲಾದ ನಾಲ್ವರ ಮತ್ತು ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಮುಂಜಾನೆ ನಡೆದಿತ್ತು.

ಶಾಗ್ಯ ಗ್ರಾಮದ ಸಮೀಪದ ಮರಿಯ ಮಂಗಲ ಬೀಟ್ ನಲ್ಲಿ ಘಟನೆ ನಡೆದಿದ್ದು, ಮೃತರನ್ನು ತೊಮಿಯರ್ ಪಾಳ್ಯ ಗ್ರಾಮದ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಎಂದು ಗುರುತಿಸಲಾಗಿದೆ. ಮರಿಯ ಮಂಗಲದ ಮಹಿಮಾದಾಸ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರೆನ್ನಲಾದ ನಾಲ್ವರು, ವನ್ಯ ಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುವ ಸಮಯದಲ್ಲಿ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಸಾವನ್ನಪ್ಪಿದ್ದರು ಎನ್ನಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News