ಬಿಡದಿ ಟೌನ್‍ಶಿಪ್ ಯೋಜನೆ | ನ್ಯಾ.ನರೇಂದ್ರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿದ ಸರಕಾರ

Update: 2026-08-21 21:59 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ಬಿಡದಿ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’ ಕುರಿತು ಪರ-ವಿರೋಧದ ಅಭಿಪ್ರಾಯಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ನರೇಂದ್ರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

ತಜ್ಞರ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸದಸ್ಯರಾಗಿದ್ದು, ಪ್ರಸನ್ನ ಕುಮಾರ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾನೂನಾತ್ಮಕ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ 30 ದಿನಗಳೊಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಗಡುವು ನೀಡಲಾಗಿದೆ.

ಸುಮಾರು 18,133 ಕೋಟಿ ರೂ.ವೆಚ್ಚದ, 7,481 ಎಕರೆಗೂ ಹೆಚ್ಚು ವ್ಯಾಪ್ತಿಯ ಬೃಹತ್ ಯೋಜನೆ ಇದಾಗಿದೆ. ಬೆಂಗಳೂರು ನಗರದಲ್ಲಿ ಅತಿಯಾದ ಸಾರಿಗೆ ಒತ್ತಡ ಕಡಿಮೆ ಮಾಡಲು ಮತ್ತು ನಾಗರಿಕರಿಗೆ ವಸತಿ, ಉದ್ಯೋಗ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಪರಿಕಲ್ಪನೆಯೊಂದಿಗೆ ಈ ಸಮಗ್ರ ಉಪನಗರವನ್ನು ಅಭಿವೃದ್ಧಿಪಡಿಸಲು ಸರಕಾರ ಉದ್ದೇಶಿಸಿದೆ.

ಈ ಯೋಜನೆಯ ವ್ಯಾಪ್ತಿಯಲ್ಲಿ ಕೆಂಚನಕುಪ್ಪೆ, ವಡೇರಹಳ್ಳಿ, ಮಂಡಲಹಳ್ಳಿ, ಕೆ.ಜಿ. ಗೊಲ್ಲರಪಾಳ್ಯ, ಬನ್ನಿಗಿರಿ, ಅಲ್ಲಾಳಸಂದ್ರ ಮತ್ತು ಹೊಸೂರು ಸೇರಿದಂತೆ 7 ಗ್ರಾಮಗಳ 5,461 ಎಕರೆ 05 ಗುಂಟೆ ಪ್ರದೇಶಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿ, ಭೂ ಮಾಲಕರಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News