×
Ad

ಮೋದಿ ಸರಕಾರದ ‘ಅಚ್ಚೇದಿನ್’ ನೋಡಲೂ ಇಲ್ಲ, ‘ಅಮೃತಕಾಲ’ದಲ್ಲಿ ಬದುಕಲೂ ಆಗುತ್ತಿಲ್ಲ : ಬಿ.ಕೆ.ಹರಿಪ್ರಸಾದ್

Update: 2026-05-15 18:01 IST

ಬಿ.ಕೆ.ಹರಿಪ್ರಸಾದ್/ನರೇಂದ್ರ ಮೋದಿ(PC : ANI)

ಬೆಂಗಳೂರು : ‘ದೇಶದ ಜನರು ಮೋದಿ ಸರಕಾರದ ‘ಅಚ್ಚೇದಿನ್’ ನೋಡಲೂ ಇಲ್ಲ, ‘ಅಮೃತಕಾಲ’ದಲ್ಲಿ ಬದುಕಲೂ ಆಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯಿಂದಾಗಿ ದೇಶದ ಜನರ ಜೀವನವೇ ಬರ್ಬಾದ್ ಆಗುತ್ತಿದೆ. ‘ಅಚ್ಚೇ ದಿನ್’ ಹೆಸರಿನಲ್ಲಿ ದೇಶದ ಜನರನ್ನು ಮೋಸ ಮಾಡಿದ ಬಿಜೆಪಿ ಸರಕಾರ, ಇಂದು ಜನರಿಗೆ ಕೊಟ್ಟಿರುವುದು ದುಬಾರಿ ಬದುಕು, ತೆರಿಗೆ ದರೋಡೆ ಮತ್ತು ಯುವಜನತೆಗೆ ನಿರುದ್ಯೋಗದ ನರಕ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ ಎಂದು ಸಬೂಬು ಹೇಳುತ್ತಿರುವ ಕೇಂದ್ರ ಸರಕಾರ, ಅದೇ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲಬೆಲೆ ಇಳಿಕೆಯಲ್ಲಿದ್ದಾಗ ಯಾಕೆ ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಲಿಲ್ಲ?. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ದೇಶದ ಜನರಿಗೆ ಲಾಭ ಸಿಗಲಿಲ್ಲ ಯಾಕೆ?. ಅದಾನಿ-ಅಂಬಾನಿ ತೈಲ ಕಂಪೆನಿಗಳ ಲಾಭಕ್ಕಾಗಿ ಜನಸಾಮಾನ್ಯರ ಮೇಲೆ ತೆರಿಗೆ ಹೇರಿದ್ದು ಕೇಂದ್ರ ಸರಕಾರ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಪೆಟ್ರೋಲ್, ಡೀಸೆಲ್ ತೈಲ ದರ ಏರಿದರೆ ಅದರ ಪರಿಣಾಮ ಕೇವಲ ವಾಹನಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ದೇಶದ ಬೆನ್ನೆಲುಬು ರೈತನ ಹೊಲದಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಆಹಾರ ವಸ್ತುವಿನ ಮೇಲೂ ಅದರ ಹೊರೆ ಬೀಳುತ್ತದೆ. ಸಾರಿಗೆ ವೆಚ್ಚ ಹೆಚ್ಚುತ್ತದೆ, ಅದರ ಪರಿಣಾಮವಾಗಿ ತರಕಾರಿ, ಅಕ್ಕಿ, ಹಣ್ಣು, ಹಾಲು ದಿನಬಳಕೆಯ ಪ್ರತಿಯೊಂದು ವಸ್ತುವಿನ ದರವೂ ಏರುತ್ತದೆ. ಅಂತಿಮವಾಗಿ ಸಾಮಾನ್ಯ ಜನರ ಅಡಿಗೆ ಮನೆಯೇ ಕುಸಿದು ಬೀಳುತ್ತದೆ’ ಎಂದು ಅವರು ಟೀಕಿಸಿದ್ದಾರೆ.

‘ಜನರಿಗೆ ಅಚ್ಚೇ ದಿನ್ ಭ್ರಮೆ ಸೃಷ್ಟಿಸಿ, ಅದಾನಿ-ಅಂಬಾನಿಗಳಂತಹ ಕಾರ್ಪೊರೇಟ್ ಸಾಮ್ರಾಜ್ಯಗಳಿಗೆ ‘ಅಮೃತಕಾಲ’ವನ್ನೇ ಮೋದಿ ಸರಕಾರ ಧಾರೆ ಎರೆದಿದೆ. ಚುನಾವಣೆ ಮುಗಿಯುವವರೆಗೆ ‘ಧರ್ಮ ಅಪಾಯದಲ್ಲಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ, ಪಾಕಿಸ್ತಾನ, ಮಂದಿರ, ಮಂಗಲಸೂತ್ರ’ ಎಂಬ ಭಾವನಾತ್ಮಕ ನಾಟಕ. ಚುನಾವಣೆ ಮುಗಿದ ತಕ್ಷಣ ಜನರಿಗೆ ಸಿಗೋದು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ, ತೆರಿಗೆ ಹೊಡೆತ ಮತ್ತು ಬದುಕಿನ ಉಸಿರುಗಟ್ಟುವ ಸಂಕಷ್ಟ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ಜನರ ಜೇಬು ಖಾಲಿ ಮಾಡಿ, ಕಾರ್ಪೊರೇಟ್ ಖಜಾನೆ ತುಂಬಿಸುವ ರಾಜಕಾರಣಕ್ಕೆ ದೇಶ ಎಷ್ಟು ದಿನ ಬಲಿಯಾಗಬೇಕು?. ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಕೇಂದ್ರ ಬಿಜೆಪಿ ಸರಕಾರದ ದುರಾಡಳಿತಕ್ಕೆ ಜನರು ಭಾರಿ ಬೆಲೆ ತೇರಬೇಕಿದೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯುವ ದಿನಗಳು ದೂರವಿಲ್ಲ’ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News