×
Ad

ದುಡಿಯುವ ಕಾರ್ಮಿಕರ ಶಕ್ತಿಯೆ, ಈ ದೇಶದ ಶಕ್ತಿ : ಬಿ.ಕೆ.ಹರಿಪ್ರಸಾದ್

Update: 2026-06-27 20:39 IST


ಬೆಂಗಳೂರು : ರಕ್ತ ಬೆವರು ಸುರಿಸಿ ದೇಶ ಕಟ್ಟುತ್ತಿರುವ ಪ್ರತಿಯೊಬ್ಬ ಕಾರ್ಮಿಕರು ದೇಶಭಕ್ತರು. ದುಡಿಯುವ ಕಾರ್ಮಿಕರ ಶಕ್ತಿಯೇ, ಈ ದೇಶದ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ‘ಭಾರತ್ ಜೋಡೊ’ ಭವನದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಐಎನ್‍ಟಿಯುಸಿ)ನ ಕೇಂದ್ರ ಕಾರ್ಯಕಾರಿ ಸಮಿತಿಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವತಂತ್ರ ನಂತರ ದೇಶದ ಕಾರ್ಮಿಕರನ್ನು ಸಂಘಟಿಸಲು ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ಕಟ್ಟಲು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಜವಾಹರ್ ಲಾಲ್ ನೆಹರೂ ಅವರ ದೂರದೃಷ್ಟಿಯಿಂದ ಕಟ್ಟಿದ ಕಾರ್ಮಿಕ ಸಂಘಟನೆಯೆ ಐಎನ್‍ಟಿಯುಸಿ ಎಂದು ಅವರು ಹೇಳಿದರು.

ಎಚ್‍ಎಂಟಿ, ಬಿಇಎಂಎಲ್, ಐಟಿಐ ಸೇರಿದಂತೆ ಅನೇಕ ಸಾರ್ವಜನಿಕ ಸಂಸ್ಥೆಗಳನ್ನು ನೆಹರು ಹುಟ್ಟು ಹಾಕಿದರು. ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿ ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಕಾರ್ಮಿಕರನ್ನು ಬೀದಿಗೆ ತಳ್ಳಿದೆ ಎಂದು ಹರಿಪ್ರಸಾದ್ ಕಿಡಿಗಾರಿದರು.

ದುಡಿಯುವ ಕೈಗಳಿಗೆ ಕೆಲಸ ನೀಡಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ದೇಶದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಜಾರಿಗೆ ತಂದರು. ಇದು ಕೇವಲ ಕಾರ್ಯಕ್ರಮವಾಗಿರಲಿಲ್ಲ, ಉದ್ಯೋಗದ ಕಾನೂನನ್ನೆ ಜಾರಿಗೆ ತಂದರು. ಆದರೆ, ಈಗ ಉದ್ಯೋಗ ಖಾತ್ರಿ ಯೋಜನೆಯನ್ನೆ ಬುಡಮೇಲು ಮಾಡಲು ನರೇಂದ್ರ ಮೋದಿ ಸರಕಾರ ಹೊರಟಿದೆ. ಇದರ ವಿರುದ್ಧ ಪ್ರಬಲ ಹೋರಾಟವನ್ನು ಸಂಘಟಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ನೇತಾರ, ಮಾಜಿ ಸಂಸದ ಸಂಜೀವ್ ರೆಡ್ಡಿ, ರಾಜ್ಯದ ಹಿರಿಯ ಕಾರ್ಮಿಕ ಮುಖಂಡ ಎನ್.ಎಂ.ಅಡಂತ್ಯಾಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಅನೇಕ ರಾಜ್ಯಗಳ ಮುಖಂಡರು ಭಾಗವಹಿಸಿದ್ದರು.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News