Tumakur | ಯುವತಿಗೆ ಚಾಕುವಿನಿಂದ ಇರಿದು, ಚಲಿಸುತ್ತಿದ್ದ ಕಾರಿನಲ್ಲಿ ನಾಡಬಾಂಬ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ
ತುಮಕೂರು : ನಾಡ ಬಾಂಬ್ ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಜೋಗಿಹಳ್ಳಿ ಬಳಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯಲ್ಲಿ ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಕಾರಿನಲ್ಲಿ ಕರೆತಂದಿದ್ದ ನಾಗೇಂದ್ರ ಎಂಬಾತ ಚಲಿಸುತ್ತಿದ್ದ ಕಾರಿನಲ್ಲಿ ನಾಡ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನು ಘಟನೆ ನಡೆದ ವೇಳೆ ಪ್ರಯಾಣದ ಮಧ್ಯೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದ್ದು, ಆಕ್ರೋಶಗೊಂಡ ನಾಗೇಂದ್ರ ಯುವತಿಗೆ ಚಾಕುವಿನಿಂದ ಇರಿದಿದ್ದು, ಈ ವೇಳೆ ಯುವತಿ ತಕ್ಷಣವೇ ಕಾರಿನ ಡೋರ್ ತೆಗೆದಿದ್ದಾಳೆ. ಇದೇ ಸಂದರ್ಭದಲ್ಲಿ ಯುವತಿ ರಸ್ತೆಗೆ ಬೀಳುತ್ತಿದ್ದಂತೆ ಏಕಾಏಕಿ ಯುವಕ ಕಾರಿನೊಳಗೆ ಕೂತು ನಾಡ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ (30) ಕಾರಿನೊಳಗೆ ಸುಟ್ಟು ಕರಕಲಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಯುವತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.