ನಾಳೆ(ಜೂ.28) ಪಲ್ಸ್ ಪೋಲಿಯೋ ಅಭಿಯಾನ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದಲ್ಲಿ ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದೊಂದಿಗೆ ರವಿವಾರ (ಜೂ.28)ದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಾರತವು 14 ವರ್ಷಗಳಿಗೂ ಮೇಲ್ಪಟ್ಟು ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಹರಡುವಿಕೆ ಇನ್ನೂ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ ಈ ಅಭಿಯಾನವನ್ನು ನಡೆಸಲಾಗುತ್ತಿದೆ.
ಮೊದಲನೇ ದಿನ ಜೂ.28ರಂದು ಪೋಲಿಯೋ ಬೂತ್‍ಗಳಲ್ಲಿ ಲಸಿಕೆ ನೀಡಲಾಗುವುದು. ನಂತರದ 2 ರಿಂದ 3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ರಾಜ್ಯದಲ್ಲಿ 1,14,213 ಆರೋಗ್ಯ ಕಾರ್ಯಕರ್ತರನ್ನು ಸೇವೆಗೆ ನಿಯೋಜಿಸಲಾಗಿದೆ. ರಾಜ್ಯದಲ್ಲಿ 64.84 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ 36,076 ಬೂತ್‍ಗಳನ್ನು ರಚಿಸಲಾಗಿದ್ದು, 7,197 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.