×
Ad

ಮೃತ ಸರಕಾರಿ ನೌಕರನ ಅವಲಂಬಿತಳಾದ ವಿವಾಹಿತ ಪುತ್ರಿಯೂ ಅನುಕಂಪದ ನೇಮಕಾತಿಗೆ ಅರ್ಹ : ಹೈಕೋರ್ಟ್

Update: 2026-06-27 20:07 IST

ಬೆಂಗಳೂರು : ವಿವಾಹಿತ ಮಗಳು ಮೃತ ಸರಕಾರಿ ನೌಕರನ ಮೇಲೆ ಅವಲಂಬಿತಳಾಗಿ, ಅವರೊಂದಿಗೇ ವಾಸಿಸುತ್ತಿದ್ದರೆ ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಅರ್ಹಳಾಗಿರುತ್ತಾಳೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಚಿತ್ರದುರ್ಗದ ಜೋಗಿಮಟ್ಟಿಯ ಆರ್‌. ಸವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಕುಟುಂಬದ ವ್ಯಾಖ್ಯಾನದಲ್ಲಿ ವಿವಾಹಿತ ಹೆಣ್ಣುಮಕ್ಕಳನ್ನು ಸೇರಿಸುವ ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ತಿದ್ದುಪಡಿಯು ಹಿಂದಿನಿಂದಲೂ ಜಾರಿಯಲ್ಲಿದೆ ಹಾಗೂ ವಿವಾಹಿತ ಪುತ್ರಿಯೂ ಅನುಕಂಪದ ಉದ್ಯೋಗದ ಪರಿಗಣನೆಗೆ ಅರ್ಹಳಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಸವಿತಾ ಅವರ ಅರ್ಜಿ ತಿರಸ್ಕರಿಸಿದ್ದ ಕೆಎಟಿ ಆದೇಶವನ್ನು ರದ್ದುಪಡಿಸಿದೆ. ಜತೆಗೆ, ಅನುಕಂಪದ ಆಧಾರದಲ್ಲಿ ಉದ್ಯೋಗ ನೇಮಕಾತಿಗೆ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶಿಸಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?

'ಕುಟುಂಬ' ಹಾಗೂ 'ಅವಲಂಬಿ' ಎಂಬ ಪದಗಳ ವ್ಯಾಖ್ಯಾನವನ್ನು ಅವಿವಾಹಿತರು, ವಿವಾಹಿತರು, ವಿಚ್ಛೇದಿತರು ಅಥವಾ ವಿಧವೆಯರು ಆಗಿರಲಿ ಅವರು ಮೃತ ಸರಕಾರಿ ನೌಕರನ ಮೇಲೆ ಅವಲಂಬಿತರಾಗಿದ್ದರೆ ಹಾಗೂ ಅವರೊಂದಿಗೇ ವಾಸಿಸುತ್ತಿದ್ದರೆ, ಅವರನ್ನು ಸೇರ್ಪಡೆ ಮಾಡಲು ವಿಸ್ತರಣೆ ಮಾಡಲಾಗಿತ್ತು. ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿಯನ್ನು ಪರ್ಯಾಯದ ಮೂಲಕ ಮಾಡಲಾಗಿದೆ. ಬದಲಿ ನಿಬಂಧನೆಯನ್ನು ಅದರ ಆರಂಭದಿಂದಲೂ ಕಾನೂನಿನ ಭಾಗವಾಗಿದೆ ಎಂದು ಪರಿಗಣಿಸಲಾಗುತ್ತದೆ. ಅರ್ಜಿದಾರರು ಮೃತ ನೌಕರನ ವಿವಾಹಿತ ಮಗಳು ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದಲ್ಲಿ ನೇಮಕಾತಿ ಅರ್ಜಿ ತಿರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ವಿವಾಹಿತ ಪುತ್ರಿಯರು ಇತರ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿದರೆ ಅನುಕಂಪದ ನೇಮಕಾತಿಗಾಗಿ ಪರಿಗಣಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರ ತಾಯಿ ನಿವೃತ್ತ ಸರಕಾರಿ ನೌಕರರಾಗಿದ್ದು, ಅವರು ಪಿಂಚಣಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅನುಕಂಪದ ಆಧಾರದಲ್ಲಿ ನೇಮಕಾತಿಗಾಗಿ ಅರ್ಜಿದಾರರ ಮನವಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಆದೇಶಿಸಿದೆ.

ತಿದ್ದುಪಡಿ ತಂದಿದ್ದ ಸರಕಾರ:

ಅನುಕಂಪದ ಆಧಾರದಲ್ಲಿ ನೇಮಕಾತಿಯನ್ನು ಹಕ್ಕಿನ ವಿಷಯವೆಂದು ಹೇಳಲಾಗುವುದಿಲ್ಲ. ಆದರೆ, ಮೃತ ಸರಕಾರಿ ನೌಕರನ ಅರ್ಹ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಯೋಜನೆಯಡಿ ಪರಿಗಣನೆಗೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಸಮನ್ವಯ ನ್ಯಾಯಪೀಠ ಹೇಳಿದೆ. ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ಅಡಿಯಲ್ಲಿ ವಿವಾಹಿತ ಹೆಣ್ಣುಮಕ್ಕಳನ್ನು ಆರಂಭದಲ್ಲಿ ಸಹಾನುಭೂತಿಯ ನೇಮಕಾತಿಗೆ ಅರ್ಹ ಅವಲಂಬಿತರ ವ್ಯಾಖ್ಯಾನದಿಂದ ಹೊರಗಿಡಲಾಗಿತ್ತು. ಆದರೆ, ಭುವನೇಶ್ವರಿ ವಿ. ಪುರಾಣಿಕ್‌ ಹಾಗೂ ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ವಿವಾಹಿತ ಹೆಣ್ಣುಮಕ್ಕಳನ್ನು ಅನುಕಂಪದ ನೇಮಕಾತಿಯಿಂದ ಹೊರಗಿಡುವುದು ಅಸಂವಿಧಾನಿಕ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಆನಂತರ, ಹಾಲಿ ಇದ್ದ ನಿಬಂಧನೆಗಳನ್ನು ಬದಲಿಸುವ ಮೂಲಕ ರಾಜ್ಯ ಸರಕಾರ 1996ರ ನಿಯಮಗಳನ್ನು ತಿದ್ದುಪಡಿ ಮಾಡಿತ್ತು.

ಪ್ರಕರಣವೇನು?

ಚಳ್ಳಕೆರೆ ತಾಲೂಕಿನ ಪ್ರಿ-ಮೆಟ್ರಿಕ್‌ ಎಸ್‌ಟಿ ಬಾಲಕರ ಹಾಸ್ಟೆಲ್‌ನಲ್ಲಿ ಅಡುಗೆಯವರಾಗಿ (ಗ್ರೂಪ್-ಡಿ) ಕೆಲಸ ಮಾಡುತ್ತಿದ್ದ ಅರ್ಜಿದಾರರ ತಂದೆ ಸೇವೆಯಲ್ಲಿದ್ದಾಗ 2014ರ ಫೆಬ್ರವರಿ 25ರಂದು ಮೃತಪಟ್ಟಿದ್ದರು. ಅವರ ಮಗಳು (ಅರ್ಜಿದಾರರು) ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರಲ್ಲಿ ವಿವಾಹಿತ ಮಗಳನ್ನು ಅಂತಹ ನೇಮಕಾತಿಗೆ ಪರಿಗಣಿಸಲು ಯಾವುದೇ ನಿಬಂಧನೆ ಇರಲಿಲ್ಲ.

ತಂದೆಯ ಸಾವಿಗೆ ಮುನ್ನವೇ ಸವಿತಾ ವಿವಾಹವಾಗಿದ್ದರು. ಸವಿತಾ ಮೃತರ ವಿವಾಹಿತ ಮಗಳು ಹಾಗೂ ಅವರ ತಾಯಿ ನಿವೃತ್ತ ಸರ್ಕಾರಿ ನೌಕರಳಾಗಿದ್ದು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣ ನೀಡಿ ಸಮಾಜ ಕಲ್ಯಾಣ ಇಲಾಖೆಯು ಸವಿತಾ ಅವರಿಗೆ ಅನುಕಂಪದ ಆಧಾರದ ನೇಮಕಾತಿ ಮನವಿಯನ್ನು ತಿರಸ್ಕರಿಸಿ ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಸವಿತಾ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ತಿರಸ್ಕರಿಸಿತ್ತು, ಆದರೆ, ವಿವಾಹಿತ ಪುತ್ರಿಯೂ ಅನುಕಂಪದ ಆಧಾರದಲ್ಲಿ ಹುದ್ದೆಗೆ ಅರ್ಹರೆಂದು ಹೇಳಿತ್ತು. ಆದ್ದರಿಂದ, ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News