ಹಾಸನ ಜಿಲ್ಲಾಧಿಕಾರಿ ವಿರುದ್ದ ಲಂಚ ಆರೋಪ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಪೊಲೀಸ್ ನೊಟೀಸ್
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (File Photo)
ಬೆಂಗಳೂರು: ಹಾಸನ ಜಿಲ್ಲಾಧಿಕಾರಿಗಳ ವಿರುದ್ದ ಲಂಚ ಪ್ರಕರಣ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಪೊಲೀಸರು ವಿಚಾರಣೆಗೆ ಹಾಜರಾಗಲು ನೊಟೀಸ್ ಜಾರಿ ಮಾಡಿದ್ದಾರೆ. ಸೈಬರ್ ಕಮಾಂಡ್ ಸೆಂಟರ್ ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸರು ಕುಮಾರಸ್ವಾಮಿಯವರ ಜೆಪಿ ನಗರದ ನಿವಾಸಕ್ಕೆ ತೆರಳಿ ನೋಟೀಸ್ ನೀಡಿದ್ದಾರೆ.
ನವೆಂಬರ್ 8 ರಂದು ಎಚ್.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಹಾಸನ ಜಿಲ್ಲಾಧಿಕಾರಿ ವಿರುದ್ದ ಲಂಚದ ಆರೋಪ ಮಾಡಿದ್ದರು. ಡಿಸಿ ಪಿಎ ಶಶಿಕಿರಣ್ ರ ಚಾಟ್ ಇದು ಎಂದು ಕೆಲವು ಸ್ಕ್ರೀನ್ ಶಾಟ್ ಗಳನ್ನು ಅವರು ಬಿಡುಗಡೆ ಮಾಡಿದ್ದರು.
ಈ ಬಗ್ಗೆ ಡಿಸಿ ಪಿಎ ಶಶಿಕಿರಣ್ ಅವರು ತಮ್ಮ ನಂಬರ್ ಬಳಸಿ ಎಐ ಮೂಲಕ ವಾಟ್ಸಾಫ್ ಚಾಟ್ ಸೃಷ್ಟಿಸಿದ್ದಾರೆ ಎಂದು ದೂರು ನೀಡಿದ್ದರು. ನಂತರ ಹಾಸನದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸೈಬರ್ ಕಮಾಂಡ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿತ್ತು.
ಈ ವೇಳೆ ಶಶಿಕಿರಣ್ ಮೊಬೈಲ್ ಪಡೆದು ಪರಿಶೀಲನೆ ಮಾಡಿರುವ ಪೊಲೀಸರು ಈಗ ಎಚ್.ಡಿ. ಕುಮಾರಸ್ವಾಮಿಗೆ ನೊಟೀಸ್ ಜಾರಿ ಮಾಡಿದ್ದಾರೆ