ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo: X/@DKShivakumar)

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯು ಒಂದು ರೀತಿಯಲ್ಲಿ ‘ಅಪರಾಧ ಸಂಚು’ ಎಂದು ಬಣ್ಣಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನರ ಜನಾದೇಶವನ್ನು ಪಡೆಯುವ ಬದಲು ಬಿಜೆಪಿ ಚುನಾವಣಾ ಅಕ್ರಮಗಳಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಟೈಮ್ಸ್ ನೌ ಶೃಂಗಸಭೆ ಕರ್ನಾಟಕ’ದಲ್ಲಿ ಮಾತನಾಡಿದ ಅವರು, ಬಿಜೆಪಿ ಮಾಡಿದ ಅತಿದೊಡ್ಡ ಪ್ರಮಾದವೆಂದರೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ತಮ್ಮ ಕೇಂದ್ರ ಕಚೇರಿಯಿಂದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದುರ್ಬಲ ವರ್ಗದವರ ಮತಗಳನ್ನು ಅಳಿಸಿ ಹಾಕಲು ಅರ್ಜಿಗಳನ್ನು ಮುದ್ರಿಸಿ ಕಳುಹಿಸಿದ್ದರು ಎಂದು ದೂರಿದರು.

ನಾನು ಆ ದಿನ ತುರ್ತಾಗಿ ಮಧ್ಯಪ್ರವೇಶಿಸದೆ ಇದ್ದಿದ್ದರೆ, ಕಾಂಗ್ರೆಸ್‍ಗೆ ಮತಗಳು ಬೀಳುವ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ರಿಂದ 17 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅವರು ಅಳಿಸಿಹಾಕುತ್ತಿದ್ದರು. ಹಾಗಾಗಿ ತಕ್ಷಣವೇ ನಾನು ಇದರ ವಿರುದ್ಧ ಹೋರಾಡಬೇಕಾಯಿತು. ಇದಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರದಿಂದ 15 ಸಾವಿರ ಹೆಸರುಗಳನ್ನು ತೆಗೆದುಹಾಕುವ ಗುರಿಯೊಂದಿಗೆ, ಸ್ಥಳೀಯ ಪಕ್ಷದ ಕಾರ್ಯಕರ್ತರಿಗೆ ಫಾರ್ಮ್ 7 ಅರ್ಜಿಗಳೊಂದಿಗೆ ತಮ್ಮ ಆಧಾರ್ ಮತ್ತು ದೂರವಾಣಿ ಸಂಖ್ಯೆಗಳನ್ನು ಸಲ್ಲಿಸುವಂತೆ ಕೇಳಲಾಗಿತ್ತು ಎಂದು ಶಿವಕುಮಾರ್ ಹೇಳಿದರು.

ಮತಗಳ್ಳತನದ ವಿರುದ್ಧ ಮೊದಲು ಹೋರಾಟ ಆರಂಭಿಸಿದ್ದು ಕರ್ನಾಟಕ. ಮಹದೇವಪುರದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿದಿತ್ತು. ಒಂದು ಸಣ್ಣ ಮನೆಯಲ್ಲಿ 80 ಮತದಾರರಿದ್ದರು, ಮತ್ತೊಂದರಲ್ಲಿ 40 ಮತದಾರರಿದ್ದರು ಎಂದು ಶಿವಕುಮಾರ್ ಹೇಳಿದರು.

ಚುನಾವಣಾ ಅಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸಿದ ಮೊದಲ ಪಕ್ಷಗಳಲ್ಲಿ ಕಾಂಗ್ರೆಸ್ ಕೂಡ ಒಂದಾಗಿತ್ತು ಎಂದು ಹೇಳಿದ ಶಿವಕುಮಾರ್, ರಾಷ್ಟ್ರೀಯ ಚುನಾವಣಾ ಆಯೋಗದ ಕಚೇರಿ ಬಿಜೆಪಿ ಕಚೇರಿಯಾಗಿ ಮಾರ್ಪಟ್ಟಿದೆ. ಮತದಾರರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಮತದಾರರ ಹಕ್ಕು ರಕ್ಷಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯೋಗದ ನಡೆಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಆಯೋಗದ ಕಚೇರಿಗೆ ಭೇಟಿ ನೀಡಿ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಅವಕಾಶ ನೀಡಲಾಗುತ್ತಿಲ್ಲ. ಎಸ್‍ಐಆರ್ ವಿಷಯವನ್ನು ನಿರ್ವಹಿಸುತ್ತಿರುವ ರೀತಿ ಸ್ವೀಕಾರ್ಹವಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.