"ಶಂಕರ ಬಿದರಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬೇಕಿತ್ತು": ಸಚಿವ ಎಂ.ಬಿ.ಪಾಟೀಲ್ ಆಕ್ರೋಶ
"ಬಿದರಿ ಒಬ್ಬ ಅಪ್ಪಟ ಸುಳ್ಳುಗಾರ"
ಸಚಿವ ಎಂ.ಬಿ.ಪಾಟೀಲ್ / ಶಂಕರ ಬಿದರಿ
ಬೆಂಗಳೂರು: ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿಯ ಜತೆ ಕೈಜೋಡಿಸಿರುವ ಶಂಕರ ಬಿದರಿ ಅವರು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಾಗಿತ್ತು. ಆದರೆ, ಆ ಕನಿಷ್ಠ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಬಿದರಿ ಒಬ್ಬ ಅಪ್ಪಟ ಸುಳ್ಳುಗಾರ ಎಂದು ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಲೇಖಕ ರವಿ ಹಂಜ್ರ ‘ಬಸವ ಮಂಟಪ' ಕೃತಿಯ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎಂದಿದ್ದಾರೆ. ಆದರೆ ಇದೇ ವ್ಯಕ್ತಿ ಮೂರ್ನಾಲ್ಕು ಪಕ್ಷಗಳನ್ನು ಬದಲಿಸಿ, ಚುನಾವಣೆಗೆ ನಿಂತು, ಬಿದರಿ ಠೇವಣಿ ಕಳೆದುಕೊಂಡಿದ್ದಾರೆ. ಇಂತಹ ಹೀನ ಮನಸ್ಸಿನ ವ್ಯಕ್ತಿಯಿಂದ ತಮಗೆ ಉಪದೇಶದ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
‘ನಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ ಮತ್ತು ಶಿಕ್ಷಣ ಪ್ರಸಾರಕ್ಕಾಗಿ ದಾನ ನೀಡಿದ್ದಾರೆ. ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ದಾನಗಳೆಲ್ಲ ಗೊತ್ತಿವೆ. ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ. ನನಗೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ' ಎಂದು ಪಾಟೀಲ್ ಹೇಳಿದ್ದಾರೆ.
ತಾನು ಸತ್ಯವಂತ, ಬಸವಣ್ಣನ ಅನುಯಾಯಿ ಎಂದೆಲ್ಲ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ. ಸಿದ್ಧಗಂಗಾ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಉಲ್ಲೇಖಿಸಿದ್ದಾರೆ.
ಸಿದ್ಧಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ನಾನು ಅವರ ಕಚೇರಿಗೆ ಹೋಗಿದ್ದೆ ಎಂದು ಶಂಕರ ಬಿದರಿ ಹೇಳಿರುವುದು ಹಸಿ ಸುಳ್ಳು. ನಾನು ಅವರ ಕಚೇರಿಗೆ ಹೋಗಿಯೇ ಇಲ್ಲ. ಇದು ಅನೈತಿಕ ಕಟ್ಟುಕತೆ. ನಾನು ಯಾರ ಮನೆ ಬಾಗಿಲಿಗೂ ಹೋಗಿ, ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆ ತಗ್ಗಿಸುವಂತಹ ಪ್ರಶ್ನೆಯೇ ಇಲ್ಲ' ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.