×
Ad

‘ವಾಣಿಜ್ಯ ಎಲ್‍ಪಿಜಿ ಕೊರತೆ’ | ಕೇಂದ್ರ ಸರಕಾರ ತುರ್ತು ಮಧ್ಯಪ್ರವೇಶಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ

Update: 2026-03-10 20:45 IST

ಬೆಂಗಳೂರು : ಬೆಂಗಳೂರಿನ ವಾಣಿಜ್ಯ ಎಲ್‍ಪಿಜಿ ಕೊರತೆ ಉಂಟಾಗಿದ್ದು, ಕೇಂದ್ರ ಸರಕಾರ ತುರ್ತಾಗಿ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮಂಗಳವಾರ ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಪರಿಷ್ಕೃತ ಆದೇಶದ ಎಲ್‍ಪಿಜಿ ಉತ್ಪಾದನೆಯನ್ನು ಪ್ರಾಮುಖ್ಯತೆಯಿಂದ ಗೃಹ ಬಳಕೆದಾರರಿಗೆ ಮಾತ್ರ ಪೂರೈಕೆ ಮಾಡಲು ತೈಲ ಮಾರುಕಟ್ಟೆ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ಗೃಹ ಬಳಕೆದಾರರಿಗೆ ನಿರಂತರ ಎಲ್‍ಪಿಜಿ ಪೂರೈಕೆ ಮಾಡುವ ಉದ್ದೇಶ ಶ್ಲಾಘನೀಯವಾದದ್ದು. ಆದರೂ, ಬೆಂಗಳೂರಿನಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಕೊರತೆ ಉಂಟಾಗಿರುವುದು ತಿಳಿದುಬಂದಿದೆ. ನಗರದ ಹಲವು ಹೊಟೇಲ್ ಮತ್ತು ಉಪಹಾರ ಗೃಹ ಸಂಘಗಳು ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿವೆ ಎಂದು ಮುಖ್ಯಮಂತ್ರಿ ಗಮನ ಸೆಳೆದಿದ್ದಾರೆ.

ಎಲ್‍ಪಿಜಿ ಸಿಲಿಂಡರ್‍ಗಳ ಪೂರೈಕೆ ಶೀಘ್ರದಲ್ಲೇ ಪುನರ್ ಆರಂಭವಾಗದಿದ್ದರೆ ಕೆಲವು ಸಂಸ್ಥೆಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಸಣ್ಣ ಹೊಟೇಲ್‍ಗಳು, ಮೆಸ್ಸುಗಳು ಮತ್ತು ಕೇಟರಿಂಗ್ ಘಟಕಗಳು ಪ್ರತಿದಿನ ಲಕ್ಷಾಂತರ ಜನರಿಗೆ ಆಹಾರ ಒದಗಿಸುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ನಡೆದ ಚರ್ಚೆಗಳ ಪ್ರಕಾರ ರಾಜ್ಯದ ವಾಣಿಜ್ಯ ಎಲ್‍ಪಿಜಿ ಬೇಡಿಕೆಯನ್ನು ಪ್ರಮುಖ ಮೂರು ಕಂಪೆನಿಗಳಾದ ಐಒಸಿಎಲ್ ದಿನಕ್ಕೆ ಸುಮಾರು 500-550 ಮೆಟ್ರಿಕ್ ಟನ್, ಎಚ್‍ಪಿಸಿಎಲ್ ಸುಮಾರು 300 ಮೆಟ್ರಿಕ್ ಟನ್ ಹಾಗೂ ಬಿಪಿಸಿಎಲ್ ಸುಮಾರು 230 ಮೆಟ್ರಿಕ್ ಟನ್ ಎಲ್‍ಪಿಜಿ ಪೂರೈಸುತ್ತಿವೆ. ಆದರೆ, ಈ ಪೂರೈಕೆಯಲ್ಲಿ ಉಂಟಾದ ಏಕಾಏಕಿ ವ್ಯತ್ಯಯದಿಂದ ಹೊಟೇಲ್‍ಗಳು, ಕೇಟರಿಂಗ್ ಸಂಸ್ಥೆಗಳು ಮತ್ತು ಇತರ ವಾಣಿಜ್ಯ ಬಳಕೆದಾರರು ತೀವ್ರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದರಿಂದ ನಗರದ ದೈನಂದಿನ ಜೀವನದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸಮಸ್ಯೆಯಿಂದ ಮನೆಗಳಿಂದ ದೂರವಿದ್ದು ಹೊಟೇಲ್ ಮತ್ತು ಮೆಸ್ಸುಗಳ ಮೇಲೆ ಅವಲಂಬಿತವಾಗಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೂ ತೊಂದರೆ ಉಂಟಾಗಿದೆ. ಜೊತೆಗೆ ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು ಮತ್ತು ಕಾರ್ಯಕ್ರಮ ವೇದಿಕೆಗಳು ಕೂಡ ವಾಣಿಜ್ಯ ಎಲ್‍ಪಿಜಿ ಪೂರೈಕೆಯ ಅನಿಶ್ಚಿತತೆಯಿಂದ ಸಂಕಷ್ಟ ಎದುರಿಸುತ್ತಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಬೆಂಗಳೂರಿನಂತಹ ಮಹಾನಗರದಲ್ಲಿ ವಾಣಿಜ್ಯ ಎಲ್‍ಪಿಜಿ ಮೇಲೆ ಇರುವ ಅವಲಂಬನೆ ದೊಡ್ಡ ಮಟ್ಟದಲ್ಲಿರುವುದರಿಂದ ಹೊಟೇಲ್‍ಗಳು, ಉಪಹಾರ ಗೃಹಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಸಮರ್ಪಕ ಎಲ್‍ಪಿಜಿ ಪೂರೈಕೆ ಖಚಿತಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ. ಆದುದರಿಂದ, ಎಲ್‍ಪಿಜಿ ಪೂರೈಕೆ ಸಮಸ್ಯೆಯನ್ನು ನಿವಾರಿಸಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News