×
Ad

Budget Session 2026 | ದೇವೇಗೌಡರ ಬಲವಂತದಿಂದಲೇ ಹಣಕಾಸು ಸಚಿವ ಸ್ಥಾನಕ್ಕೆ ಬಂದೆ : ಸಿದ್ದರಾಮಯ್ಯ

Update: 2026-03-10 20:52 IST

ಬೆಂಗಳೂರು : ಈ ಹಿಂದೆ ಎಚ್.ಡಿ.ದೇವೇಗೌಡ ಅವರ ಬಲವಂತದಿಂದಲೇ ಹಣಕಾಸು ಸಚಿವ ಸ್ಥಾನಕ್ಕೆ ಬಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, 100 ಕುರಿಗಳನ್ನು ಲೆಕ್ಕ ಹಾಕಲು ಬಾರದ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಹೇಗೆ ಮಂಡಿಸುತ್ತಾರೆ ಎಂದು ಆರಂಭದ ದಿನಗಳಲ್ಲಿ ಟೀಕೆ ಮಾಡಿದನ್ನು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ದೇವೇಗೌಡ ಅವರು ಅವಕಾಶ ಕೊಟ್ಟಿದ್ದರಿಂದಾಗಿ ಇಂದು ಸಿದ್ದರಾಮಯ್ಯ 17 ಬಜೆಟ್‍ಗಳನ್ನು ಮಂಡಿಸಲು ಸಾಧ್ಯವಾಗಿದೆ ಎಂದರು.

ತಪ್ಪು ಮಾಹಿತಿ ಹೋಗಬಾರದು ಎಂದು ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಸಂಪುಟದಲ್ಲಿ ಖಾತೆಗಳ ಹಂಚಿಕೆ ಕುರಿತು ಕೋಲಾರದಲ್ಲಿರುವ ಆರ್.ಎಲ್.ಜಾಲಪ್ಪ ಅವರ ವೈದ್ಯಕೀಯ ಕಾಲೇಜಿನಲ್ಲಿ ಚರ್ಚೆಯಾಗುತ್ತಿತ್ತು. ದೇವೇಗೌಡರು, ಎಂ.ಪಿ. ಪ್ರಕಾಶ್, ಪಿ.ಜಿ.ಆರ್.ಸಿಂಧ್ಯಾ, ಆರ್.ಎಲ್.ಜಾಲಪ್ಪ ಮತ್ತು ನಾನು ಹಾಜರಿದ್ದೇವು. ನನಗೆ ಕಂದಾಯ ಇಲಾಖೆಯನ್ನು ನೀಡಬೇಕೆಂದು ಬೇಡಿಕೆ ಇತ್ತು. ಆದರೆ, ಆರ್.ಎಲ್.ಜಾಲಪ್ಪ ಆ ಖಾತೆ ನನಗೆ ಬೇಕು ಎಂದು ಪಟ್ಟು ಹಿಡಿದರು. ಆಗ ದೇವೇಗೌಡರು ನನಗೆ ಹಣಕಾಸು ಖಾತೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ನಾನು ಆರ್ಥಿಕ ತಜ್ಞನಲ್ಲ, ಅರ್ಥಶಾಸ್ತ್ರವನ್ನು ಓದಿಲ್ಲ. ಹೀಗಾಗಿ ಹಣಕಾಸು ಖಾತೆ ಬೇಡ ಎಂದು ಹೇಳಿದ್ದೆ. ಅದಕ್ಕೆ ಒಪ್ಪದ ದೇವೇಗೌಡರು ನನಗೆ ನಂಬಿಕಸ್ತರೇ ಬೇಕು. ನೀನೇ ಹಣಕಾಸು ಖಾತೆಯನ್ನು ನೋಡಿಕೊಳ್ಳಬೇಕು ಎಂದು ಬಲವಂತ ಮಾಡಿಕೊಟ್ಟರು ಎಂದು ಉಲ್ಲೇಖಿಸಿದರು.

ಬಳಿಕ ಅಶೋಕ್ ಮಾತನಾಡಿ, ದೇವೇಗೌಡರು ಅವಕಾಶ ಕೊಟ್ಟಿದ್ದರಿಂದಾಗಿ ಇಂದು ನೀವು ಹೆಚ್ಚು ಬಜೆಟ್ ಮಂಡಿಸಿ ದಾಖಲೆ ಮಾಡಲು ಸಾಧ್ಯವಾಗಿದೆ. ಇದಕ್ಕಾಗಿ ನೀವು ದೇವೇಗೌಡರಿಗೆ ಧನ್ಯವಾದ ಹೇಳಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News