×
Ad

ಮೆಜೆಸ್ಟಿಕ್ ಬಸ್ ನಿಲ್ದಾಣ ಅಭಿವೃದ್ಧಿಗೆ ‘ಪ್ರಾಜೆಕ್ಟ್ ಮೆಜೆಸ್ಟಿಕ್' ಜಾರಿ : ರಾಮಲಿಂಗಾರೆಡ್ಡಿ

Update: 2026-03-10 20:59 IST

ಬೆಂಗಳೂರು : ರಾಜ್ಯದ ಹೆಮ್ಮೆಯ ಸಾರಿಗೆ ಕೇಂದ್ರವಾಗಿರುವ ಬೆಂಗಳೂರಿನ ಮೆಜೆಸ್ಟಿಕ್ ಅಥವಾ ಕೆಂಪೇಗೌಡ ಬಸ್ ನಿಲ್ದಾಣವು ಶೀಘ್ರದಲ್ಲೇ ಅಂತಾರಾಷ್ಟ್ರೀಯ ದರ್ಜೆಯ ರೂಪ ಪಡೆಯಲಿದೆ. ಈ ನಿಲ್ದಾಣವನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮರು ಅಭಿವೃದ್ಧಿಪಡಿಸಲು ಸರಕಾರವು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಅವರು ನಿಯಮ-330ರ ಅಡಿಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯು ಕೇವಲ ಬಸ್ ನಿಲ್ದಾಣಕ್ಕೆ ಸೀಮಿತವಾಗಿರದೆ, ಮೆಟ್ರೋ, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಸೇವೆಗಳನ್ನು ಒಂದೇ ಸೂರಿನಡಿ ಜೋಡಿಸುವ ಅಂತಾರಾಷ್ಟ್ರೀಯ ಮಟ್ಟದ ‘ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್' ಆಗಿ ಅಭಿವೃದ್ಧಿಗೊಳ್ಳಲಿದೆ ಎಂದರು.

ಮೆಜೆಸ್ಟಿಕ್ ಪ್ರದೇಶವು ಒಟ್ಟು 40 ಎಕರೆ ವಿಸ್ತೀರ್ಣವನ್ನು ಹೊಂದಿದ್ದು 8 ಎಕರೆ ಬಿಎಂಆರ್‍ಸಿಎಲ್ (ಮೆಟ್ರೋ) ನಿಲ್ದಾಣಕ್ಕಾಗಿ ಮೀಸಲಿಡಲಾಗಿದೆ. 32 ಎಕರೆ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ನಿಲ್ದಾಣಗಳ ಸುಸಜ್ಜಿತ ಮರು ಅಭಿವೃದ್ಧಿ ಬಳಕೆಗೆ ಯೋಜಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಸಿಂಗಾಪುರ ಮಾದರಿಯ ಹೈ-ಟೆಕ್ ವ್ಯವಸ್ಥೆ: ಅಂತಾರಾಷ್ಟ್ರೀಯ ಬಸ್ ಸ್ಟೇಷನ್ ಮಾಡ್ಯೂಲ್(ಸಿಂಗಾಪುರ ಮಾದರಿ) ಆಧಾರದ ಮೇಲೆ ಇದನ್ನು ನಿರ್ಮಿಸಲಾಗುವುದು. ಇದರಲ್ಲಿ ಹೈ-ಟೆಕ್ ಬಸ್ ನಿಲ್ದಾಣದೊಂದಿಗೆ ಬಹುಮಹಡಿ ವ್ಯಾಪಾರ ಸಂಕೀರ್ಣಗಳು, ವಿಶಾಲವಾದ ರಿಟೇಲ್ ಶಾಪಿಂಗ್ ಹಬ್‍ಗಳು ಮತ್ತು ಪ್ರಯಾಣಿಕರಿಗೆ ಬೇಕಾದ ಅತ್ಯಾಧುನಿಕ ಜೀವನಶೈಲಿ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಈ ಬೃಹತ್ ಯೋಜನೆಯನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲು ಸರಕಾರವು ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ನೋಂದಾಯಿತ ಟ್ರಾನ್ಸಾಕ್ಷನ್ ಅಡ್ವೈಸರ್ ಆದ ಎಂ.ಎಸ್. ರಿಸಜೆರ್ಂಟ್ ಇಂಡಿಯಾ ಲಿಮಿಟೆಡ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ಯೋಜನೆಯ ರೂಪಷೆ ಹಾಗೂ ಟೆಂಡರ್ ಪ್ರಕ್ರಿಯೆಯ ಕಾರ್ಯಗಳನ್ನು ಆರಂಭಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಅಭಿವೃದ್ಧಿ ಕಾರ್ಯಗಳು ನಡೆಯುವ ಹಂತದಲ್ಲಿ ಸುಮಾರು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರಕಾರವು ಕ್ರಮಕೈಗೊಂಡಿದೆ. ನಗರದಲ್ಲಿರುವ ಹಾಲಿ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ, ಟಿಟಿಎಂಸಿ ಕೇಂದ್ರಗಳನ್ನು ಬಳಸಿ ಬಸ್‍ಗಳ ಕಾರ್ಯಾಚರಣೆಯನ್ನು ವಿಕೇಂದ್ರೀಕರಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳು, ಆಸನ ವ್ಯವಸ್ಥೆ ಮತ್ತು ವಿಶೇಷವಾಗಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲಾಗುವುದು. ಮೆಟ್ರೋ ಮತ್ತು ಬಸ್ ನಿಲ್ದಾಣದ ನಡುವೆ ಪ್ರಯಾಣಿಸುವವರಿಗೆ ಅಡಚಣೆಯಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಇಳಿಜಾರು, ರೈಲಿಂಗ್ ಹಾಗೂ ಸ್ಕೈ-ವಾಕ್‍ಗಳನ್ನು ಸುರಕ್ಷತಾ ಬೇಲಿಯೊಂದಿಗೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

2025-26ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರಕಾರ ಬದ್ಧವಾಗಿದೆ. ಈ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನಗರದ ಹೃದಯಭಾಗಕ್ಕೆ ಆಧುನಿಕ ಮತ್ತು ಸುಂದರ ನೋಟವನ್ನು ನೀಡಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News