ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣ : ವಿಚಾರಣೆ ಎದುರಿಸಿದ ಬಿಜೆಪಿ ಶಾಸಕ ಬೈರತಿ ಬಸವರಾಜ್
ಬೈರತಿ ಬಸವರಾಜ್
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಶನಿವಾರ ಭಾರತಿನಗರ ಠಾಣೆಯ ಪೊಲೀಸರ ಎದುರು ವಿಚಾರಣೆಯನ್ನು ಎದುರಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ನೀಡಿರುವ ನೋಟಿಸ್‍ನಂತೆ ಬೈರತಿ ಬಸವರಾಜ್ ಅವರು ಜು19ರ ಶನಿವಾರ ಬೆಳಗ್ಗೆ 11:30ಕ್ಕೆ ವಿಚಾರಣೆಗೆ ಹಾಜರಾಗಬೇಕು. ಪೊಲೀಸರು ಬಿಎನ್‍ಎಸ್ ಕಾಯ್ದೆ 35(3,4,5) ರಡಿಯಲ್ಲಿ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಬೇಕೆಂದು ಜು.18ರ ಶುಕ್ರವಾರ ಹೈಕೋರ್ಟ್ ಸೂಚನೆ ನೀಡಿತ್ತು.
ಇತ್ತೀಚೆಗೆ ಹಲಸೂರು ಕೆರೆ ಸಮೀಪ ಮಾರಕಾಸ್ತ್ರಗಳಿಂದ ರೌಡಿಶೀಟರ್ ಶಿವಪ್ರಕಾಶ್ ಯಾನೆ ಬಿಕ್ಲು ಶಿವನನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಜಗದೀಶ್‍ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧವೂ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಎಫ್‍ಐಆರ್‍ನಲ್ಲಿನ ಹೆಸರು ತೆಗೆಯಲು ಕೋರಿ ಅರ್ಜಿ ಸಲ್ಲಿಸಿದ್ದರು.
ವಿರೋಧ ಪಕ್ಷದವರ ಸಿಲುಕಿಸಲು ಯತ್ನ: ಬಿ.ವೈ.ವಿಜಯೇಂದ್ರ
ವಿರೋಧ ಪಕ್ಷದ ಶಾಸಕರನ್ನು ಶತ್ರುಗಳಂತೆ ಪರಿಗಣಿಸಿರುವ ಕಾಂಗ್ರೆಸ್ ಸರಕಾರ ಈ ಹಿಂದಿನಿಂದಲೂ ಬಿಜೆಪಿ ಶಾಸಕರನ್ನು ಒಂದಿಲ್ಲೊಂದು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಲೇ ಇದೆ. ಅದರ ಮುಂದುವರೆದ ಭಾಗವಾಗಿ ಮಾಜಿ ಸಚಿವರೂ ಆದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ವಿರುದ್ಧ ಸಂಬಂಧವೇ ಇರದ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸುವ ಪ್ರಯತ್ನ ನಡೆದಿರುವುದು ಅತ್ಯಂತ ಖಂಡನೀಯ ಎಂದು ತನ್ನ ಎಕ್ಸ್ ಖಾತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜಕೀಯ ಪ್ರೇರಿತವಾಗಿ ಯಾವ ಪ್ರಕರಣವನ್ನೂ ದಾಖಲಿಸಿಲ್ಲ: ‘ವಿಪಕ್ಷದವರ ಆರೋಪದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧ ರಾಜಕೀಯ ಪ್ರೇರಿತವಾಗಿ ಕ್ರಮ ಕೈಗೊಂಡಿಲ್ಲ, ದೂರು ನೀಡಿರುವ ಮಹಿಳೆಯು ಕೊಲೆ ಪ್ರಕರಣದಲ್ಲಿ ಶಾಸಕರ ಹೆಸರು ಹೇಳಿದ್ದರಿಂದಾಗಿ ಆರೋಪಿಗಳಿಗೂ, ಶಾಸಕರಿಗೂ ಸಂಬಂಧ ಇದೆಯೇ? ಎಂಬುದನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾವು ಅಧಿಕಾರಕ್ಕೆ ಎರಡು ವರ್ಷದಲ್ಲಿ ರಾಜಕೀಯ ಪ್ರೇರಿತವಾಗಿ ಯಾವ ಪ್ರಕರಣವನ್ನೂ ದಾಖಲಿಸಿಲ್ಲ’
-ಡಾ.ಜಿ.ಪರಮೇಶ್ವರ್ ಗೃಹ ಸಚಿವ
......................