ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್ ಸಂಘಟಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಗೊತ್ತಾಗಿದೆ.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಪುನರ್ ರಚಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು ‘ಮುಖ್ಯ ಪೊಲೀಸ್ ಆಯುಕ್ತರು' ಎಂದು ಉನ್ನತೀಕರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು (ಸಂಚಾರ) ಹುದ್ದೆಯನ್ನು ‘ಪೊಲೀಸ್ ಆಯುಕ್ತರು (ಸಂಚಾರ)' ಎಂದು ಮರು ಪದನಾಮೀಕರಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಸಚಿವ ಸಂಪುಟ ಅನುಮೋದಿಸಿದೆ.

ಪ್ರಸ್ತಾವಿತ ಘಟಕಗಳಲ್ಲಿ ಅಪರಾಧ ಪ್ರಕರಣಗಳ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರು ನಿಯೋಜಿಸಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಎಂದು ಸಚಿವರು ಹೇಳಿದ್ದಾರೆ.

ಅದೇ ರೀತಿ, ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಮತ್ತು ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2 ರಂತೆ ಒಟ್ಟು 6 ಹೊಸ ಎಸಿಪಿ ಹುದ್ದೆಗಳನ್ನು ಸೃಜಿಸಲಾಗುವುದು. ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ನೀಡಲಾಗುವುದು. ಆಡಳಿತಾತ್ಮಕ ವೆಚ್ಚವನ್ನು ಸರಳೀಕರಿಸಲು, ಪ್ರಸ್ತುತ ಇರುವ ಸಿಎಆರ್ ಘಟಕಗಳಿಂದಲೇ ಹುದ್ದೆಗಳನ್ನು ಮರುನಿಯೋಜಿಸಿ ಪೂರ್ವ ವಿಭಾಗಕ್ಕಾಗಿ ಹೊಸ ಸಿಎಆರ್ ಘಟಕವನ್ನು ರಚಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

ನ್ಯಾಯಾಂಗ ಡಿಜಿಟಲೀಕರಣ: ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ ಮತ್ತು ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 704 ಕೋಟಿ ರೂ., ವೆಚ್ಚದ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (ಕೆಎಸ್‍ಡಿಸಿ) ಮೂಲಕ ನ್ಯಾಯಾಂಗಕ್ಕಾಗಿ ದತ್ತಾಂಶ ಕೇಂದ್ರ ಹಾಗೂ ವಿಪತ್ತು ಮರುಸ್ಥಾಪನಾ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಡಿಜಿಟಲೀಕರಣ ಮತ್ತು ಡಿಜಿಟಲ್ ರೂಪಾಂತರ ಕಾಮಗಾರಿಗಳನ್ನು ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.

ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ: ‘ದಿ ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಆರ್ಡಿನೆನ್ಸ್, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022 ಅನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕಾರಗೊಂಡಿದ್ದ ಈ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಅದರಂತೆ ವಿಧೇಯಕವನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯಕ್ಕೆ ರವಾನಿಸಲಾಗಿತ್ತು.

ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲ ಅವಕಾಶಗಳಿರುವುದರಿಂದ, ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಇರುವ ‘ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022' ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor