ʼನಂದಿನಿʼ ಹಾಲು ಮಾರಾಟ ದರ ಪ್ರತಿ ಲೀಟರ್ಗೆ 8 ರೂ. ಏರಿಕೆಗೆ ಸಂಪುಟ ಒಪ್ಪಿಗೆ?
ಬೆಂಗಳೂರು : ರಾಜ್ಯದಲ್ಲಿ ನಂದಿನಿ ಹಾಲಿನ ಮಾರಾಟ ದರ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ಲೀಟರ್ ಗೆ 8 ರೂ. ಬೆಲೆ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಹಾಲು ಒಕ್ಕೂಟಗಳ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಲಿನ ದರ ಪರಿಷ್ಕರಣೆ ಮಾಡಿದೆ. ಆದರೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ದರ ಏರಿಕೆಗೆ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ತೀರ್ಮಾನಿದ್ದಾರೆ ಎಂದು ಗೊತ್ತಾಗಿದೆ. ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದರೆ ನ.1ರಿಂದ ಹಾಲಿನ ದರ ಏರಿಕೆ ಸಾಧ್ಯತೆ ಇದೆ.
ಬರ ಪರಿಸ್ಥಿತಿಯಲ್ಲಿ ಬೆಳೆ ಕೊರತೆಯಿಂದ ವ್ಯವಸಾಯ ಆದಾಯ ತೀವ್ರ ಕುಸಿತ ಹಾಗೂ ಹೈನುಗಾರಿಕೆಗೆ ಅಗತ್ಯವಿರುವ ಪಶು ಆಹಾರ, ಮೇವು, ಔಷಧೋಪಚಾರ ಸೇರಿದಂತೆ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಇತ್ತೀಚಿಗೆ ಹಾಲು ಒಕ್ಕೂಟಗಳ ನಿಯೋಗ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಹಾಲಿನ ದರ ಏರಿಕೆಗೆ ಬೇಡಿಕೆ ಇಟ್ಟಿದ್ದರು.
ಪ್ರೊತ್ಸಾಹಧನ: ಅದೇ ರೀತಿ, ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಶೇ. 25ರಷ್ಟು ಸಹಾಯಧನದಲ್ಲಿ (ಸಬ್ಸಿಡಿ) ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಪ್ರೊತ್ಸಾಹಧನ ನೀಡುವ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗೊತ್ತಾಗಿದೆ. ಯೋಜನೆಯ ಒಟ್ಟು ವೆಚ್ಚ 18 ಕೋಟಿ ರೂಪಾಯಿ ಗಳಾಗಿದ್ದು, ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ 9 ಕೋಟಿ ರೂ., ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ 9.00 ಕೋಟಿ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ಗೊತ್ತಾಗಿದೆ.
ಸಂಪುಟ ಪ್ರಮುಖ ತೀರ್ಮಾನಗಳೇನು?
* ಕೆಐಎಡಿಬಿ ವತಿಯಿಂದ ಸುವರ್ಣ ಕರ್ನಾಟಕ ಅಭಿವೃದ್ಧಿ ಕಾರಿಡಾರ್ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳ ಪೈಕಿ ಶಿವಮೊಗ್ಗ ಜಿಲ್ಲೆ ಮತ್ತು ತಾಲೂಕಿನ ಸಿದ್ಧಿಪುರ ಮತ್ತು ದೇವಕಾತಿಕೊಪ್ಪ ಗ್ರಾಮಗಳ 362.21 ಎಕರೆ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಒಪ್ಪಿಗೆ.
* ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ವಾರ್ಷಿಕ ಅಂದಾಜು 44.37 ಕೋಟಿ ರೂ.ಗಳ ಮೊತ್ತದಲ್ಲಿ ಬಾಡಿಗೆ ಆಧಾರದ ಮೇಲೆ ಅಳವಡಿಸಲು ಒಪ್ಪಿಗೆ. ಸಂಪೂರ್ಣ ಕೇಂದ್ರ ಸರಕಾರದ ಅನುದಾನ.
* ಕೆಎಸ್ಸಾರ್ಟಿಸಿ ಸಂಸ್ಥೆ ಅಡಿಯಲ್ಲಿ ಒಟ್ಟು 800 ಹೊಸ ಬಿ.ಎಸ್-VI City ಪೂರ್ಣ ನಿರ್ಮಿತ ಬಸ್ಸುಗಳನ್ನು ಒಟ್ಟು 304 ಕೋಟಿ ರೂ., ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
* ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರಿನ 5 ನಗರಪಾಲಿಕೆಗಳ ಸೇವೆಗಳನ್ನು ತಲುಪಿಸಲು ಐದು ಸಂಯೋಜಿತ ಎಂಡ್-ಟು-ಎಂಡ್ ನಾಗರಿಕ ಸೌಲಭ್ಯ ಮತ್ತು ಸೇವಾ ವಿತರಣಾ ಕೇಂದ್ರಗಳನ್ನು ಗ್ಯಾರಂಟಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ.