ನಮೂನೆ-7 ದುರ್ಬಳಕೆ ಆರೋಪ ಪ್ರಕರಣ: ವಿಶೇಷ ತನಿಖಾ ತಂಡ ರಚನೆಗೆ ರಾಮಲಿಂಗಾರೆಡ್ಡಿ ಆಗ್ರಹ
ಬೆಂಗಳೂರು : ಎಸ್‍ಐಆರ್ ಪ್ರಕ್ರಿಯೆ ಸಂಬಂಧ ನಮೂನೆ-7 ಅನ್ನು ದುರ್ಬಳಕೆ ಮಾಡಿಕೊಂಡು ಅರ್ಹ ಮತದಾರರನ್ನು ರದ್ದುಗೊಳಿಸುವಂತೆ ಸಾವಿರಾರು ಅರ್ಜಿಗಳು ಸಲ್ಲಿಕೆ ಮಾಡಲಾಗುತ್ತಿರುವ ಹಿನ್ನೆಲೆ ತನಿಖೆ ನಡೆಸಲು ರಾಜ್ಯ ಸರಕಾರ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆ ಮಾಡಬೇಕು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯನಗರ ವಿಧಾನಸಭಾ ಕ್ಷೇತ್ರದಿಂದ ಹಲವು ಕಡೆಗಳಲ್ಲಿ ನಮೂನೆ 7 ಅನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳ ಸಂಬಂಧ ದೂರುಗಳು ದಾಖಲಾಗುತ್ತಿವೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿ ಶಾಸಕರ ಕಚೇರಿಯಿಂದ ಆರೆಸ್ಸೆಸ್ ಕುಮ್ಮಕ್ಕಿನಿಂದ ಅರ್ಹ ಮತಗಳನ್ನು ಕದಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಜಯನಗರದಲ್ಲಿ ಈ ಬಗ್ಗೆ ಆಡಿಯೊ ಕೂಡ ವೈರಲ್ ಆಗಿದೆ. ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಸಚಿವರು ಒತ್ತಾಯಿಸಿದರು.