ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಸಮೀಪ ತಾಂತ್ರಿಕ ದೋಷದ ಕಾರಣ ತರಬೇತಿ ಲಘು ವಿಮಾನವೊಂದು ತೊಗರಿ ಜಮೀನಿನಲ್ಲಿ ತುರ್ತು ಭೂಸ್ಪರ್ಶವಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ವಿಮಾನ ನಿಲ್ದಾಣದ ಸಮೀಪ ಸೇಡಂ ರಸ್ತೆಯ ಪಕ್ಕದಲ್ಲಿರುವ ತೊಗರಿ ಜಮೀನಿನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಮಾನದಲ್ಲಿ ಇಬ್ಬರು ತರಬೇತಿ ಪೈಲಟ್‌ಗಳು ಇದ್ದರು ಎಂದು ತಿಳಿದುಬಂದಿದೆ.

ವಿಮಾನದಲ್ಲಿ ದಿಢೀರನೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್‌ಗಳು ತಕ್ಷಣ ಕಾರ್ಯಪ್ರವೃತ್ತರಾಗಿ ತೊಗರಿ ಬಿತ್ತನೆ ಮಾಡಿದ್ದ ಜಮೀನಿನಲ್ಲೇ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ ಎನ್ನಲಾಗಿದೆ.

ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.

ವಿಜಯಪುರದಲ್ಲೂ ವಿಮಾನ ಪತನವಾಗಿತ್ತು :

2026ರ ಫೆಬ್ರವರಿಯಲ್ಲಿ ನೆರೆಯ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಲಘು ವಿಮಾನವೊಂದು ಪತನಗೊಂಡಿತ್ತು. ಈ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು.

ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ರೆಡ್‌ ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಸೆಸ್ನಾ 172 ‘ಟ್ಯಾಂಗೋ ಚಾರ್ಲಿ’ ಹೆಸರಿನ ಖಾಸಗಿ ಲಘು ವಿಮಾನ ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಪತನಗೊಂಡಿತ್ತು ಎಂದು ವರದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor