ರೇಣುಕಾಸ್ವಾಮಿ ಕೊಲೆ ಪ್ರಕರಣ; ಪ್ರತಿಕೂಲ ಸಾಕ್ಷಿ ನುಡಿದ ಪ್ರಾಸಿಕ್ಯೂಷನ್ ಸಾಕ್ಷಿ ಪುನೀತ್
ದರ್ಶನ್/ರೇಣುಕಾಸ್ವಾಮಿ
ಬೆಂಗಳೂರು : ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಯಾಗಿ ಪರಿಗಣಿಸಲ್ಪಟ್ಟಿರುವ ಪ್ರಾಸಿಕ್ಯೂಷನ್ ಸಾಕ್ಷಿ ಎಂ.ಜಿ. ಪುನೀತ್ ಪ್ರತಿಕೂಲ (ಹಾಸ್ಟೈಲ್) ಸಾಕ್ಷ್ಯ ನುಡಿದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 58ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಬುಧವಾರ ಮುಂದುವರಿಸಿದರು.
ಪುನೀತ್ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಜಪ್ತಿ ಮಾಡಿದ ವಾಹನಗಳನ್ನು ಪಟ್ಟಣಗೆರೆ ಶೆಡ್‌ನಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು. 2024ರ ಜೂನ್ 8ರಂದು (ಶನಿವಾರ) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಾಗ, ಆ ದಿನ ಬೆಳಗ್ಗೆ 10 ಗಂಟೆಗೆ ಶೆಡ್‌ಗೆ ಹೋಗಿದ್ದೆ. ನಂತರ ಶೆಡ್ ಮಾಲೀಕರ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿ, ಮಧ್ಯಾಹ್ನ 12.30ಕ್ಕೆ ಶೆಡ್‌ಗೆ ಮರಳಿದ್ದೆ. ಸಂಜೆ 6.30ರವರೆಗೆ ಅಲ್ಲಿಯೇ ಇದ್ದೆ. ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋದೆ ಎಂದು ಪುನೀತ್ ಹೇಳಿಕೆ ನೀಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಿಂದ ಭಾನುವಾರ ಮನೆಗೆ ಹಿಂದಿರುಗಿ, ಸೋಮವಾರ ಕೆಲಸಕ್ಕೆ ಹೋಗಿದ್ದೆ. ಶೆಡ್‌ನಲ್ಲಿ ಕೊಲೆಯಾಗಿದೆ ಎಂಬ ಸುದ್ದಿ ಮಂಗಳವಾರ ಟಿವಿಯಲ್ಲಿ ನೋಡಿದೆ. ಆದರೆ, ಇಂದು ನ್ಯಾಯಾಲಯದಲ್ಲಿ ಹಾಜರಾರಿರುವ ಮತ್ತು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಆರೋಪಿಗಳನ್ನು ನಾನು ಎಲ್ಲಿಯೂ ನೋಡಿರುವುದಿಲ್ಲ. ಪೊಲೀಸರು ನನ್ನನ್ನು ಕರೆದು ವಿಚಾರಣೆ ಮಾಡಿದ್ದರು. ನಾನು ಅವರಿಗೆ ಕೊಲೆಯಾದ ದಿನ ಶೆಡ್‌ನಲ್ಲಿದ್ದೆ. ಸಂಜೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಎನ್ನುವುದು ಬಿಟ್ಟು ಬೇರೋನೂ ಪೊಲೀಸರಿಗೆ ಹೇಳಿರುವುದಿಲ್ಲ. ಬಳಿಕ ಕೋರ್ಟ್ ಮುಂದೆ ಹಾಜರಾದಗಲೂ ನಾನು ಶೆಡ್‌ನಲ್ಲಿದ್ದ ಹಾಗೂ ಇತರ ಕೆಲ ವಿಚಾರಗಳನ್ನು ಹೇಳಿದ್ದೇನೆ. ಅದು ಈಗ ನನಗೆ ನೆನಪಿಗೆ ಬುರುತ್ತಿಲ್ಲ ಎಂದು ಹೇಳಿದರು.
ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಪುನೀತ್‌ನನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿ, ಪಾಟಿ ಸವಾಲಿಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿದರು. ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ವಿಶೇಷ ಸರ್ಕಾರಿ ಅಭೀಯೋಜಕರಿಗೆ ಪಾಟಿ ಸವಾಲು ನಡೆಸಿದರು. ಆಗ ದೀಪಕ್ ಎಂಬುವವರು ಶೆಡ್ ಮಾಲೀಕರಾಗಿದ್ದಾರೆ. ಅವರ ಅಕ್ಕನ ಮಗನೇ ಪ್ರಕರಣದ 10ನೆ ಆರೋಪಿ ವಿನಯ್ ಎಂದು ಪುನೀತ್ ತಿಳಿಸಿದರಲ್ಲದೆ, ವಿಚಾರಣೆಗೆ ಹಾಜರಿದ್ದ ವಿನಯ್‌ನನ್ನು ಗುರುತಿಸಿದರು.
ನಂತರ ನ್ಯಾಯಾಲಯ ಸರ್ಕಾರಿ ಅಭಿಯೋಜಕರ ಮನವಿ ಮೇರೆಗೆ ಪುನೀತ್ ಪಾಟಿ ಸವಾಲು ಪ್ರಕ್ರಿಯೆಯನ್ನು ಮುಂದೂಡಿತು.
ಜತೆಗೆ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಎಸ್. ರಾವ್‌ಗೆ ಮಧ್ಯಂತರ ಜಾಮೀನು ನೀಡುವ ಕುರಿತ ಆದೇಶವನ್ನು ಅಕ್ಟೋಬರ್ 30ರಂದು ನೀಡುವುದಾಗಿ ನ್ಯಾಯಾಲಯ ತಿಳಿಸಿತು.
ಫಿಸಿಯೋಥೆರಪಿ ಕಲ್ಪಿಸಲು ದರ್ಶನ್ ಮನವಿ:
ದಿನದ ವಿಚಾರಣೆ ಅಂತ್ಯಗೊಳ್ಳುವ ಸಮಯದಲ್ಲಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಹಾಜರಾಗಿದ್ದ ದರ್ಶನ್, ಚಳಿಯಿಂದ ನನಗೆ ಬೆನ್ನು ನೋವು ಶುರುವಾಗಿದೆ. ಜೈಲಿನಲ್ಲಿಯೇ ಫಿಸಿಯೋಥೆರಪಿ ನೀಡಲಾಗುತ್ತಿತ್ತು. ಸದ್ಯ ಅದನ್ನು ನಿಲ್ಲಿಸಲಾಗಿದೆ. ಆದ್ದರಿಂದ, ಫಿಸಿಯೋಥೆರಪಿ ಮುಂದುರಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ದರ್ಶನ್ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆ ಕುರಿತು ನೀವು ಅರ್ಜಿ ಸಲ್ಲಿಸಿ, ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಲಾಗುವುದು ಎಂದರು. ದರ್ಶನ್ ಪರ ವಕೀಲರು, ಮುಂದಿನ ವಿಚಾರಣೆ ವೇಳೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಇದರಿಂದ, ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.