‘ಎಸ್ಐಆರ್’ 1 ಕೋಟಿ ಮತದಾರರನ್ನು ಕಿತ್ತು ಹಾಕಿದ್ದು ಹೇಗೇ? : ಬಿ.ಕೆ.ಹರಿಪ್ರಸಾದ್ ಪ್ರಶ್ನೆ
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಮೂಲಕ ಚುನಾವಣಾ ಆಯೋಗ ಸತ್ತವರು ಸೇರಿದಂತೆ ಇತರರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿದೆ. ಆದರೆ, ಗೈರು ಹಾಜರಿ (ಆಬ್ಸೆಂಟ್) ಆದವರು ಎಲ್ಲಿ ಹೋದರು? ಈ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಟ್ಟಾಗಿ(ಬಲ್ಕ್) ನೀಡಿದ್ದ ಫಾರ್ಮ್ ನಂ.7 ಅರ್ಜಿಯ ಮೂಲಕ ಬಂದ ಹೆಸರನ್ನು ತೆಗೆದುಹಾಕಿಲ್ಲ ಎಂದು ಆಯೋಗವು ಹೇಳುತ್ತಿದೆ. ಆದರೆ, 1 ಕೋಟಿ ಮತದಾರರನ್ನು ಹೇಗೆ ಕಿತ್ತು ಹಾಕಿದ್ದು, ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದರ ವಿರುದ್ದ ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಯಾವ, ಯಾವ ಬೂತ್ಗಳಲ್ಲಿ ಎಷ್ಟು ಹೆಸರುಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಿಗೂ ಹೋಗುತ್ತಿದ್ದೇನೆ. ಫಾರ್ಮ್ ನಂಬರ್ 6 ಮೂಲಕ ಮತದಾರರ ಹೆಸರನ್ನು ಸೇರಿಸುವ ಕೆಲಸ ಮಾಡಲಾಗುವುದು. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹರಿಪ್ರಸಾದ್ ನುಡಿದರು.
ದಿಲ್ಲಿಗೆ ಹೋಗುತ್ತೀವೆ: ಎಸ್ಐಆರ್ ವಿರುದ್ಧ ನವೆಂಬರ್ನಲ್ಲಿ ಹೊಸದಿಲ್ಲಿಯಲ್ಲಿ ನಡೆಸಲು ಉದ್ದೇಶಿಸಿರುವ ರ್ಯಾಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಈ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ನಾಯಕರು. ಹೀಗಾಗಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ ಎಂದರು.
ಸಿದ್ದರಾಮಯ್ಯ ಅವರ ವಿರುದ್ಧ ನಡೆಸಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಈಗಾಗಲೇ ನಾವು ಕೃತಕ ಸೃಷ್ಟಿ ಎಂದು ಹೇಳಿದ್ದೇವೆ. ಎಐ ಮೂಲಕ ಏನು ಬೇಕಾದರೂ ಸೃಷ್ಟಿಸಬಹುದು ಎಂದ ಹರಿಪ್ರಸಾದ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಡಿ.31ರ ಒಳಗೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.