ಬೆಂಗಳೂರು : ರಾಜ್ಯ ಸರಕಾರವು ಕೇಂದ್ರ ಅಪರಾಧ ಘಟಕವನ್ನು(ಸಿಸಿಬಿ) ರೌಡಿ ನಿಗ್ರಹ ದಳ ಎಂದು ಮರುನಾಮಕರಣ ಮಾಡಿದೆ. ಇದರೊಂದಿಗೆ ಹಲವು ದಶಕಗಳ ಇತಿಹಾಸ ಹೊಂದಿರುವ ಸಿಸಿಬಿ ಎಂಬ ಹೆಸರಿಗೆ ತೆರೆ ಬಿದ್ದಿದೆ.

1971ರಲ್ಲಿ ‘ಸ್ಪೆಷಲ್ ಸ್ಕ್ವಾಡ್’ ಹೆಸರಿನಲ್ಲಿ ಈ ಘಟಕ ಅಸ್ತಿತ್ವಕ್ಕೆ ಬಂದಿತ್ತು. ಆಗ ಓರ್ವ ಎಸಿಪಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ 1993ರಲ್ಲಿ ಸ್ಪೆಷಲ್ ಸ್ಕ್ವಾಡ್ ಅನ್ನು ಸಿಸಿಬಿ ಎಂದು ಮರುನಾಮಕರಣ ಮಾಡಲಾಯಿತು. ಇದೇ ವೇಳೆ ಸ್ಪೆಷಲ್ ಸ್ಕ್ವಾಡ್ ಅನ್ನು ಸಿಸಿಬಿ ಜೊತೆ ವಿಲೀನಗೊಳಿಸಲಾಯಿತು.

1994ರಲ್ಲಿ ಸಿಸಿಬಿಯನ್ನು ಮರುಸಂಘಟಿಸಿ ಡಿಸಿಪಿ ಮೇಲ್ವಿಚಾರಣೆಗೆ ಒಳಪಡಿಸಲಾಯಿತು. 2002ರಲ್ಲಿ ಅಪರಾಧಗಳ ವರ್ಗೀಕರಣದ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. 2004ರಲ್ಲಿ ತನಿಖಾಧಿಕಾರಿಗಳ ನೇಮಕಾತಿ ಹಾಗೂ ತನಿಖಾ ಸಾಮಥ್ರ್ಯವನ್ನು ವಿಸ್ತರಿಸಲಾಯಿತು. 2019ರಲ್ಲಿ ಸಿಸಿಬಿಯನ್ನು ಆರು ಪ್ರಮುಖ ವಿಭಾಗಗಳಾಗಿ ಪುನಾರಚಿಸಲಾಯಿತು.

2021ರಲ್ಲಿ ಸಿಸಿಬಿ ಅಧಿಕಾರಿಗಳ ತನಿಖಾ ಅಧಿಕಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಅಧಿಸೂಚನೆ ಹೊರಡಿಸಿತು. 2024ರಲ್ಲಿ ಸಿಸಿಬಿಗೆ ಪೊಲೀಸ್ ಠಾಣೆಯ ಮಾನ್ಯತೆ ನೀಡಲಾಗಿದ್ದು, ಎಫ್‍ಐಆರ್ ದಾಖಲಿಸುವ ಅಧಿಕಾರ ಕಲ್ಪಿಸಲಾಯಿತು. 2026ರಲ್ಲಿ ರಾಜ್ಯ ಸರಕಾರ ಸಿಸಿಬಿಯನ್ನು ‘ಆಂಟಿ ರೌಡಿ ಸ್ಕ್ವಾಡ್’ ಎಂದು ಮರುನಾಮಕರಣ ಮಾಡಿದೆ. ಹೀಗೆ 1971ರಲ್ಲಿ ಸ್ಪೆಷಲ್ ಸ್ಕ್ವಾಡ್ ಆಗಿ ಆರಂಭವಾಗಿ, 1993ರಲ್ಲಿ ಸಿಸಿಬಿಯಾಗಿ ರೂಪುಗೊಂಡಿದ್ದ ಪೊಲೀಸ್ ಘಟಕವು ಹಲವು ಹಂತಗಳ ಬದಲಾವಣೆ ಕಂಡಿದೆ.

ಸಿಸಿಬಿಗೆ ಡಿಐಜಿಪಿ ಐಜಿಪಿವರೆಗೆ ಅಧಿಕಾರಿಗಳು ಮುಖ್ಯಸ್ಥರಾಗಿದ್ದು, ಐಜಿಪಿ ಅಜಯ್ ಹಿಲೋರಿ ಇಲ್ಲಿಯವರೆಗೆ ಹೆಚ್ಚುವರಿ ಆಯುಕ್ತರಾಗಿದ್ದರು. ಇದೀಗ ಸರಕಾರದ ಹೊಸ ನಿರ್ಧಾರದೊಂದಿಗೆ ಸಿಸಿಬಿ ಎಂಬ ಹೆಸರು ಇತಿಹಾಸದ ಪುಟ ಸೇರಿದ್ದು ‘ರೌಡಿ ನಿಗ್ರಹ ದಳ’ಕ್ಕೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor