ಬೆಂಗಳೂರು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಜನಪರ ಹೋರಾಟಗಳ ಮೂಲಕ ದೇಶದ ಗಮನ ಸೆಳೆದಿರುವುದು ಮಾತ್ರವಲ್ಲದೆ, ಎಸಿ ಕೊಠಡಿಯಲ್ಲಿ ಉಳಿದುಕೊಂಡಿದ್ದ ಹಲವು ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿ ಬೀದಿಗೆ ತಂದಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಗುರುವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ಬಂದ ಬಳಿಕ ಅವರ ಘನತೆಗೆ ಧಕ್ಕೆ ತರಲು ಬಿಜೆಪಿ ಕೋಟ್ಯಂತರ ರೂಪಾಯಿ ಹಣ ವ್ಯಯ ಮಾಡಿದೆ. ಆದರೆ ರಾಹುಲ್ ಗಾಂಧಿ ಎದೆಗುಂದದೆ ಭಾರತ ಜೋಡೋ ಯಾತ್ರೆ ಮಾಡಿ ಜನರ ಸಮೀಪಕ್ಕೆ ತೆರಳಿದರು. ಅಷ್ಟೇ ಅಲ್ಲದೆ, ಜಿಎಸ್ಟಿ, ನೋಟು ಬಂದ್, ಜನಗಣತಿ, ರೈತ ವಿರೋಧಿ ಕಾನೂನು, ಮತಕಳ್ಳತನ ವಿರುದ್ಧ ರಾಹುಲ್ ಗಾಂಧಿ ಉಲ್ಲೇಖಿಸಿರುವ ಎಲ್ಲ ಅಂಶಗಳು ಸತ್ಯ ಎಂದು ಜನತಾ ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದರು.

ಬಿಜೆಪಿ ಸರಕಾರ ರಾಹುಲ್ ಗಾಂಧಿ ಅವರ ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಿ ರಾತ್ರೋ ರಾತ್ರಿ ಅವರನ್ನು ಸರಕಾರಿ ನಿವಾಸದಿಂದ ಹೊರ ಹಾಕುವವರೆಗೂ ಪಿತೂರಿ ನಡೆಸಿದ್ದಾರೆ. ಅವರ ವಿರುದ್ಧ 45 ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಐಟಿ, ಈಡಿ ತನಿಖೆ ಮಾಡಿದರು. ಇದಕ್ಕೆ ಜಗ್ಗದೆ ರಾಹುಲ್ ಗಾಂಧಿ ಅವರು ತಮ್ಮ ಹೋರಾಟ ಮುಂದುವರಿಸಿದ್ದಾರೆ. ಎಸ್‍ಐಆರ್ ಮೂಲಕ ಪ್ರಧಾನಿ ಮೋದಿ ಸರಕಾರ ಸಂವಿಧಾನ ಬುಡಮೇಲು ಮಾಡುವ ಪ್ರಯತ್ನ ಮಾಡಿದ್ದಾರೆ. ಎಸ್‍ಐಆರ್ ವಿರುದ್ಧದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ದೇಶದ ಸಮರ್ಥ ನಾಯಕ ಎಂದು ಬಿಂಬಿತವಾಗಿದೆ. ಇವರ ಹೋರಾಟಕ್ಕೆ ಕೇಂದ್ರ ಸರಕಾರ ಅಡಗಿ ಕೂರುವಂತಾಗಿದೆ. ಇದನ್ನು ನೋಡಿದರೆ 2029ರ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಗ್ರಾಮೀಣಾಭೀವೃದ್ಧಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಇಂದಿರಾಗಾಂಧಿ ಅವರ ಬಗ್ಗೆ ದೇಶದಲ್ಲಿ ಎಲ್ಲರಿಗೂ ಗೊತ್ತು. ದೇಶದ ಏಕತೆ, ಸಮಗ್ರತೆಗೆ ಪ್ರಾಣ ತ್ಯಾಗ ಮಾಡಿದ ನಾಯಕಿ ಇಂದಿರಾಗಾಂಧಿ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಪುತ್ರಿಯಾಗಿ ಚಿಕ್ಕ ವಯಸ್ಸಿನಲ್ಲಿ ಅಸಹಕಾರ ಚಳುವಳಿ ಸೇರಿದಂತೆ ಅನೇಕ ಹೋರಾಟ ಮಾಡಿದ್ದಾರೆ. 20 ಅಂಶಗಳ ಕಾರ್ಯಕ್ರಮ ಮೂಲಕ ಬಡತನ ನೀರ್ಮೂಲನೆಗೆ ಹೋರಾಟ ಮಾಡಿದರು. ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ, ಬಡತನ ಆಹಾರ ಅವಲಂಬನೆ ಇದ್ದ ಸಂದರ್ಭವನ್ನು ಬದಲಿಸಿದರು ಎಂದು ಹೇಳಿದರು.

ತೊಟ್ಟಿಲು ತೂಗುವ ಕೈ ದೇಶ ಆಳಬಲ್ಲದು ಎಂಬುದನ್ನು ಇಂದಿರಾ ಗಾಂಧಿ ಅವರು ಸಾಬೀತುಪಡಿಸಿದರು. ಪ್ರಜಾಪ್ರಭುತ್ವ ಉಳಿಸಲು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಹೋರಾಟ ಮಾಡುತ್ತಿದ್ದು, ಆ ಕುಟುಂಬ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದೆ. ನೀವೆಲ್ಲರೂ ಸ್ಥಳೀಯ ಸಂಸ್ಥೆ ಚುನಾವಣೆ, ಮುಂಬರುವ ವಿಧಾನ ಪರಿಷತ್ ಚುನಾವಣೆ, 2028ರ ವಿಧಾನಸಭೆ ಚುನಾವಣೆ, 2029ರ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಲು ನಾವು ಕೆಲಸ ಮಾಡೋಣ ಎಂದು ಸಚಿವರು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಮೇಯರ್‍ಗಳಾದ ಪದ್ಮಾವತಿ, ರಾಮಚಂದ್ರಪ್ಪ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್ ದಳಸನೂರು\ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಸಮೀರ್ ದಳಸನೂರು ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ, ಆಕಾಶವಾಣಿಯಲ್ಲೂ ಅರೆಕಾಲಿಕ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಪ್ರಸ್ತುತ ಹಲವು ವರ್ಷಗಳಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.